ಶಿರಸಿಯ ಅಲೇಕಾ ಗೆಟ್ವೇ ಬಳಿ ನಡೆಯುತ್ತಿದ್ದ ಜಗಳ ನೋಡಲು ಹೋಗಿದ್ದ ಗೋಪಾಲಕೃಷ್ಣ ಕಮಾಟೆ ಹಾಗೂ ರಾಮು ಗಾಜಿನ್ ಅಲ್ಲಿದ್ದವರಿಂದ ಪೆಟ್ಟು ತಿಂದಿದ್ದಾರೆ. ಅಲ್ಲಿ ಜಗಳ ಮಾಡುತ್ತಿದ್ದವರೇ ಒಂದಾಗಿ ಅವರಿಬ್ಬರನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಶಿರಸಿ ಗಾಂಧೀನಗರದ ಹುಲಿಯಪ್ಪನಗುಡ್ಡದ 7ನೇ ಕ್ರಾಸಿನಲ್ಲಿ ಗೋಪಾಲಕೃಷ್ಣ ಕಮಾಟೆ ಅವರು ವಾಸವಾಗಿದ್ದರು. ವೃತ್ತಿಯಲ್ಲಿ ಚಾಲಕರಾಗಿರುವ ಗೋಪಾಲಕೃಷ್ಣ ಕಮಾಟೆ ಅವರು ತಮ್ಮ ಸ್ನೇಹಿತ ರಾಮು ಗಾಜಿನ್ ಅವರ ಜೊತೆ ಅಗಸ್ಟ 10ರ ರಾತ್ರಿ ಬೈಕ್ ಸಂಚಾರ ಶುರು ಮಾಡಿದ್ದರು. ಅವರಿಬ್ಬರು ಸೇರಿ ಆ ದಿನ ಅಗಸೆ ಬಾಗಿಲು ಬಳಿಯಿರುವ ಬ್ರಹ್ಮಲಿಂಗೇಶ್ವರ ಹೊಟೇಲಿನಲ್ಲಿ ಹೊಟ್ಟೆ ತುಂಬ ಊಟ ಮಾಡಿದರು. ಅದಾದ ನಂತರ ಮರಳಿ ಮನೆ ಕಡೆ ಹೊರಟಿದ್ದರು.
ರಾತ್ರಿ 11.30ರ ವೇಳೆಗೆ ಅವರಿಬ್ಬರು ಬೈಕಿನಲ್ಲಿ ಹೋಗುತ್ತಿದ್ದಾಗ ಅಲೇಕಾ ಗೆಟ್ವೇ ಹೊಟೇಲ್ ಬಳಿ ಜಗಳವಾಗುತ್ತಿರುವುದನ್ನು ನೋಡಿದರು. ಅಲ್ಲಿ ಏನಾಗಿರಬಹುದು? ಎಂದು ತಿಳಿದುಕೊಳ್ಳುವ ಕುತೂಹಲದಿಂದ ಹತ್ತಿರ ಹೋದರು. ಆಗ ಅಲ್ಲಿ ಗೋಪಾಲಕೃಷ್ಣ ಕಮಾಟೆ ಅವರ ಪರಿಚಿತರಾದ ಚಿಪಗಿಯ ಕಿಶೋರ್ ಇದ್ದರು. ಕಿಶೋರ್ ಅವರ ಬಳಿ ತೆರಳಿದ ಗೋಪಾಲಕೃಷ್ಣ ಅವರು `ಏನಾಯಿತು?’ ಎಂದು ಪ್ರಶ್ನಿಸಿದರು. ಆ ವೇಳೆ ಅಲ್ಲಿಗೆ ಬಂದ ನಿಖಿಲ್ ನೀಲೆಕಣಿ ಏಕಾಏಕಿ ಗೋಪಾಲಕೃಷ್ಣ ಅವರಿಗೆ ಎರಡು ಏಟು ಹೊಡೆದರು. ಜೊತೆಗಿದ್ದ ರಾಮು ಗಾಜಿನ್ ಅವರಿಗೂ ಕೆನ್ನೆಗೆ ಬಾರಿಸಿದರು.
ಅಲ್ಲಿ ಬಿದ್ದಿದ್ದ ಕಲ್ಲನ್ನು ತೆಗೆದು ಬೀಸಿದಾಗ ರಾಮು ಅವರು ತಪ್ಪಿಸಿಕೊಂಡರು. ಆದರೆ, ಅಲ್ಲಿಯೇ ನಿಂತಿದ್ದ ಗೋಪಾಲಕೃಷ್ಣ ಕಮಾಟೆ ಅವರಿಗೆ ನಿಖಿಲ್ ನೀಲೆಕಣಿ ಕಲ್ಲಿನಿಂದ ತಲೆಗೆ ಜಜ್ಜಿದರು. ಆಗ ಗೋಪಾಲಕೃಷ್ಣ ಅವರು ನೆಲಕ್ಕೆ ಬಿದ್ದಿದ್ದು, ಅವರನ್ನು ಎತ್ತಲು ಬಂದ ರಾಮು ಅವರನ್ನು ಅಲ್ಲಿದ್ದ ಎಲ್ಲರೂ ಹಿಡಿದು ಥಳಿಸಿದರು. ಅವರಿಬ್ಬರ ಬಟ್ಟೆ ಹರಿದು ಅವಮಾನ ಮಾಡಿದರು. ನೆಲಕ್ಕೆ ಬಿದ್ದವರನ್ನು ಕಾಲಿನಿಂದ ತುಳಿದು ನೋವು ಮಾಡಿದರು.
ಒಟ್ಟು ನಾಲ್ವರು ಸೇರಿ ಇಬ್ಬರ ಮೇಲೆ ದಾಳಿ ನಡೆಸಿದ್ದು, ಅದರಲ್ಲಿ ಇಬ್ಬರನ್ನು ಗೋಪಾಲಕೃಷ್ಣ ಕಮಟೆ ಅವರು ಗುರುತಿಸಿದ್ದಾರೆ. ನಿಖಿಲ್ ನಿಲೇಕಣಿ ಕಿಶೋರ ಚಿಪಗಿ ಜೊತೆ ಇನ್ನಿಬ್ಬರು ಅಪರಿಚಿತರ ವಿರುದ್ಧ ಶಿರಸಿ ನಗರಠಾಣೆಯಲ್ಲಿ ದೂರು ನೀಡಿದ್ದಾರೆ.
