ಉತ್ತರ ಕನ್ನಡ ಜಿಲ್ಲೆಯ ಭೂ ದಾಖಲೆಗಳನ್ನು ಸರ್ಕಾರ ಡಿಜಿಟಲೀಕರಣ ಮಾಡುತ್ತಿದ್ದು, ಈ ವೇಳೆ ಸಾವಿರಾರು ಸಂಖ್ಯೆಯ ಭೂಮಿ ಸಾವನಪ್ಪಿದವರ ಹೆಸರಿಗಿರುವುದು ಸಮಸ್ಯೆಯಾಗಿದೆ. ಸಾವನಪ್ಪಿದವರ ಹೆಸರಿನಲ್ಲಿ ಭೂಮಿಗಳಿರುವುದರಿಂದ ಸರ್ಕಾರಿ ಯೋಜನೆಗಳು ಸಹ ಫಲಾನುಭವಿಗಳಿಗೆ ತಲುಪುತ್ತಿಲ್ಲ.
`ಸರ್ಕಾರಿ ಸೌಲಭ್ಯ ಸದುಪಯೋಗಪಡಿಸಿಕೊಳ್ಳುವುದಕ್ಕಾದರೂ ಜನ ಅವರವರ ಹೆಸರಿಗೆ ಭೂಮಿ ಮಾಡಿಕೊಳ್ಳಬೇಕು. ಕಂದಾಯ ದಾಖಲೆ ಹಾಗೂ ಆರ್ಟಿಸಿ ಅಪ್ಡೇಟ್ ಆಗದೇ ಇದ್ದರೆ ಪಿ ಎಂ ಕಿಸಾನ್ ಸೇರಿ ಬಹುತೇಕ ಯೋಜನೆಗಳು ಸಿಗುವುದಿಲ್ಲ’ ಎಂದು ಯಲ್ಲಾಪುರದ ತಹಶೀಲ್ದಾರ್ ಚಂದ್ರಶೇಖರ ಹೊಸಮನಿ ಹೇಳಿದ್ದಾರೆ. ಸದ್ಯ ಇ-ಪೌತಿ ಆಂದೋಲನ ಹಾಗೂ ಭೂ ಸುರಕ್ಷಾ ಯೋಜನೆ ಮೂಲಕ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುತ್ತಿರುವ ಬಗ್ಗೆ ಅವರು ವಿವರಿಸಿದರು. ಆದರೆ, ಸಾರ್ವಜನಿಕರಿಂದ ಸ್ಪಂದನೆ ಸಿಗದ ಬಗ್ಗೆ ಬೇಸರವ್ಯಕ್ತಪಡಿಸಿದರು.
ಯಲ್ಲಾಪುರ ತಾಲೂಕಿನಲ್ಲಿ 21 ಲಕ್ಷ ಹಳೆಯ ದಾಖಲೆಗಳಿವೆ. ಆ ಪೈಕಿ 12 ಲಕ್ಷ ದಾಖಲೆಗಳನ್ನು ಈಗಾಗಲೇ ಡಿಜಿಟಲೀಕರಣ ಮಾಡಲಾಗಿದೆ. ಉಳಿದ ದಾಖಲೆಗಳನ್ನು ಎರಡು ತಿಂಗಳಿನಲ್ಲಿ ಡಿಜಿಟಲೀಕರಣ ಮಾಡುವ ಗುರಿ ಹೊಂದಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಯಲ್ಲಾಪುರ ತಾಲೂಕು ವ್ಯಾಪ್ತಿಯಲ್ಲಿಯೇ 2252 ಪಹಣಿ ದಾಖಲೆಗಳು ಸಾವನಪ್ಪಿದವರ ಹೆಸರಿನಲ್ಲಿದೆ. ಅವರ ಹೆಸರನ್ನು ಕಡಿಮೆಗೊಳಿಸಿ ಸದ್ಯದ ವಾರಸುದಾರರ ಹೆಸರು ಸೇರಿಸುವ ಪ್ರಕ್ರಿಯೆಗೆ ಸಾರ್ವಜನಿಕ ಸ್ಪಂದನೆ ಸಿಗುತ್ತಿಲ್ಲ.
ವಂಶಾವಳಿ, ಪಹಣಿ ಪತ್ರಿಕೆ ಹಾಗೂ ವಾರಸುದಾರರ ದಾಖಲೆ ಒದಗಿಸಿದಲ್ಲಿ 2252 ಪ್ರಕರಣಗಳನ್ನು ವಿಲೇ ಮಾಡಲು ತಾಲೂಕು ಆಡಳಿತ ಆಸಕ್ತಿವಹಿಸಿದೆ. ಸಾವನಪ್ಪಿದ ವ್ಯಕ್ತಿಗಳ ವಾರಸುದಾರರನ್ನು ಹುಡುಕಿ ಈಗಾಗಲೇ ನೋಟಿಸ್ ಸಹ ನೀಡಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ಮಾಧ್ಯಮಗಳ ಮೂಲಕವೂ ತಾಲೂಕು ಆಡಳಿತ ಈ ಬಗ್ಗೆ ಅರಿವು ಮೂಡಿಸಲಾಗಿದೆ. `ಸಾರ್ವಜನಿಕರು ಸರ್ಕಾರದ ಜೊತೆ ಕೈ ಜೋಡಿಸಬೇಕು. ಇ-ಪೌತಿ ಆಂದೋಲನ ಹಾಗೂ ಭೂ ಸುರಕ್ಷಾ ಯೋಜನೆಯ ಪ್ರಯೋಜನಪಡೆಯಬೇಕು’ ಎಂದು ಯಲ್ಲಾಪುರದ ಗ್ರೇಡ್ 2 ತಹಶೀಲ್ದಾರ ಸಿ ಜಿ ನಾಯ್ಕ ಕೋರಿದ್ದಾರೆ.
