ಆರ್ಥಿಕ ಅಪರಾಧ ಪ್ರಕರಣದಲ್ಲಿ ಭಾಗಿಯಾದ ಕಾರಣ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬುಧವಾರ ಬೆಳಗ್ಗೆಯಿಂದ ಅವರ ಮನೆಯಲ್ಲಿ ಅಧಿಕಾರಿಗಳ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಶಾಸಕ ಸತೀಶ್ ಸೈಲ್ ಕಾರವಾರ-ಗೋವಾ ರಸ್ತೆಯ ಸದಾಶಿವಗಡದಲ್ಲಿ ನಿವಾಸ ಹೊಂದಿದ್ದಾರೆ. ಗೋವಾ ನೊಂದಣಿಯ ಬಾಡಿಗೆ ಕಾರಿನಲ್ಲಿ ಆಗಮಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಿಢೀರ್ ಆಗಿ ಆ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಬೆಳಗ್ಗೆ 7 ಗಂಟೆಗೆ ಗೋವಾ ಮೂಲಕ ಆಗಮಿಸಿದ ಅಧಿಕಾರಿಗಳು ಸತೀಶ್ ಸೈಲ್ ಅವರ ಮನೆ ಶೋಧ ನಡೆಸಿದರು. ಅಲ್ಲಿ ಸಿಕ್ಕ ವಿವಿಧ ದಾಖಲೆಗಳನ್ನು ಪರಿಶೀಲಿಸಿ ಹಿರಿಯ ಅಧಿಕಾರಿಗಳಿಗೆ ಫೋನ್ ಮೂಲಕ ಮಾಹಿತಿ ನೀಡಿದರು.
ಗೋವಾ ನೊಂದಣಿಯ ಬಾಡಿಗೆ ಕಾರುಗಳ ಮೂಲಕ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾರವಾರ ಪ್ರವೇಶಿಸಿದ್ದಾರೆ. ಅಧಿಕಾರಿಗಳ ದಾಳಿ ವೇಳೆ ಸತೀಶ್ ಸೈಲ್ ಮನೆಯಲ್ಲಿ ಇರಲಿಲ್ಲ. ಸದ್ಯ ಸತೀಶ್ ಸೈಲ್ ಅವರು ಬೆಂಗಳೂರಿನ ಅಧಿವೇಶನದಲ್ಲಿದ್ದು, ಅಧಿಕಾರಿಗಳು ನೋಟಿಸ್ ನೀಡಿ ಅವರಿಂದಲೂ ಇನ್ನಷ್ಟು ಕಾಗದಪತ್ರಗಳ ಬಗ್ಗೆ ಮಾಹಿತಿಪಡೆಯುವ ಸಾಧ್ಯತೆಗಳಿವೆ. ಮನೆಯಲ್ಲಿರುವ ಕುಟುಂಬ ಸದಸ್ಯರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿ ಕೇಶವ್ ನೇತ್ರತ್ವದಲ್ಲಿ ಈ ದಾಳಿ ನಡೆದಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತೀಶ್ ಸೈಲ್ ಮನೆಗೆ ಉಪಹಾರ ತರಿಸಿ ಸೇವಿಸಿದರು. ಮನೆ ಹೊರಭಾಗದಲ್ಲಿ ಕುಳಿತು ದಾಖಲೆಗಳನ್ನು ಪರಿಶೀಲಿಸುತ್ತಿರುವುದು ಕಾಣಿಸಿತು. ಅಧಿಕಾರಿಗಳ ಜೊತೆ ಅರೆ ಮಿಲಟರಿ ಪಡೆ ಸಿಬ್ಬಂದಿಯೂ ಇದ್ದು, ಅಲ್ಲಿ ಯಾವುದೇ ಗಲಾಟೆ-ಗೊಂದಲ ನಡೆಯದಂತೆ ಮುನ್ನಚ್ಚರಿಕೆವಹಿಸಲಾಗಿದೆ. ಶಾಸಕರ ಮನೆ ಸುತ್ತ ಬಿಗಿ ಭದ್ರತೆ ಒದಗಿಸಲಾಗಿದೆ.
ಬೇಲಿಕೆರೆ ಅದಿರು ನಾಪತ್ತೆ ಪ್ರಕರಣದಲ್ಲಿ ಸತೀಶ್ ಸೈಲ್ ಜೈಲು ವಾಸ ಅನುಭವಿಸಿದ್ದರು. ಅವರ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ಅಕ್ರಮ ಅದಿರು ಸಾಗಾಟ ನಡೆದ ಆರೋಪವಿದೆ. ಈಚೆಗೆ ಬಂದ ನ್ಯಾಯಾಲಯದ ಆದೇಶದಲ್ಲಿ ಸತೀಶ್ ಸೈಲ್ ಅವರಿಗೆ ಶಿಕ್ಷೆ ಪ್ರಕಟವಾಗಿದ್ದು, ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.
