ಕುಮಟಾದ ಕಿಮಾನಿಯ ಮಾಲತಿ ಹರಿಕಂತ್ರ ಅವರ ತಂದೆ ಸಾವನಪ್ಪಿದ್ದು, ಅವರಿಗೆ ಬರುತ್ತಿದ್ದ ಪಿ ಎಂ ಕಿಸಾನ್ ನೆರವು ಪುತ್ರಿ ಮಾಲತಿ ಹರಿಕಂತ್ರ ಅವರಿಗೆ ಬರುತ್ತಿಲ್ಲ. ಹೀಗಾಗಿ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ತoದೆ ಸಾವಿನ ನಂತರ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡು 2024ರ ಮಾರ್ಚ 16ರಂದು ಪಿ ಎಂ ಕಿಸಾನ್ ಯೋಜನೆಗೆ ಮಾಲತಿ ಹರಿಕಂತ್ರ ಅವರು ಅರ್ಜಿ ಹಾಕಿದರು. ಆದರೆ, ಒಂದು ವರ್ಷ ಕಳೆದರೂ ಅವರಿಗೆ ಸರ್ಕಾರದ ನೆರವು ಸಿಗಲಿಲ್ಲ. ಮಾಲತಿ ಹರಿಕಂತ್ರ ಅವರ ಕಚೇರಿ ಅಲೆದಾಟ ತಪ್ಪಲಿಲ್ಲ.
ಮಾಲತಿ ಹರಿಕಂತ್ರ ಅವರು ಹಾಕಿದ ಅರ್ಜಿಗೆ ಈವರೆಗೂ ಹಿಂಬರಹವೂ ಬಂದಿಲ್ಲ. ಯೋಜನೆ ಒದಗಿಸಲು ಆದ ಸಮಸ್ಯೆಯ ಬಗ್ಗೆಯೂ ಅಧಿಕಾರಿಗಳು ತಿಳಿಸಿಲ್ಲ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಅವರು ಪತ್ರ ಬರೆದಿದ್ದು, ಆ ಪತ್ರ ಅಪರ ಜಿಲ್ಲಾಧಿಕಾರಿಗಳ ಮೂಲಕ ಕೃಷಿ ಇಲಾಖೆಗೆ ರವಾನೆಯಾಗಿದೆ. ಜಂಟಿ ಕೃಷಿ ನಿರ್ದೇಶಕರು ಮೂರು ತಿಂಗಳಾದರೂ ಆ ಪತ್ರಕ್ಕೆ ಉತ್ತರಿಸುವ ಧೈರ್ಯ ಮಾಡಿಲ್ಲ. ಹೀಗಾಗಿ ತಂದೆಯ ಜಮೀನು ಮಾಲತಿ ಅವರಿಗೆ ಬಂದಿದ್ದರೂ ಸರ್ಕಾರದ ಯೋಜನೆಗಳು ತಂದೆಯ ಜೊತೆಯೇ ಸಾವನಪ್ಪಿದ ಅನುಮಾನ ಅವರಿಗೆ ಕಾಡುತ್ತಿದೆ.
ಅಗಸ್ಟ 13ರಂದು ತಮಗಾದ ಅನ್ಯಾಯದ ಬಗ್ಗೆ ಮಾಲತಿ ಅವರು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರಕ್ಕೆ ವಿಷಯ ಮುಟ್ಟಿಸಿದರು. ಕೇಂದ್ರದ ಅಧ್ಯಕ್ಷ ಆಗ್ನೆಲ್ ರೋಡಿಗ್ರಸ್ ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರುವುದಾಗಿ ಹೇಳಿದರು.
