ಅಗಲಿದ ಆತ್ಮಗಳಿಗೆ ಗೋಕರ್ಣ ದೇವಾಲಯದ ಅರ್ಚಕರಿಂದ ಪೂಜೆ ಮಾಡಿಸುವುದಾಗಿ ನಂಬಿಸಿ
ವಿವಿಧ ಕಂಪನಿಗಳು ಭಕ್ತರಿಗೆ ಮೋಸ ಮಾಡುತ್ತಿವೆ.
ಗೋಕರ್ಣ ದೇವಾಲಯದ ಒಳಗೆ ಮೊಬೈಲ್ ಫೋನ್ ನಿಷೇಧಿಸಲಾಗಿದೆ. ಜೊತೆಗೆ ಪಿತೃದೋಷ ಪರಿಹಾರದ ಶಾಂತಿಯನ್ನು ದೇವಾಲಯದಲ್ಲಿ ಮಾಡುವುದಿಲ್ಲ. ಅದಾಗಿಯೂ ಕಂಪನಿಯವರು ಗೋಕರ್ಣ ದೇವಾಲಯದ ಒಳಗೆ ಪಿತೃದೋಷ ಪೂಜೆ ಮಾಡಿಸುವುದಾಗಿ ಹೇಳಿದ್ದಾರೆ. ಪೂಜೆಯ ವಿಡಿಯೋವನ್ನು ರೆಕಾರ್ಡ ಮಾಡಿ ಹಣ ಪಾವತಿಸಿದವರಿಗೆ ವಾಟ್ಸಪ್ ಮಾಡುವುದಾಗಿ ಕಂಪನಿ ಹೇಳಿಕೊಂಡಿದೆ. ಪೂಜೆಯ ಪ್ರಸಾದವನ್ನು ಕೋರಿಯರ್ ಮೂಲಕ ತಲುಪಿಸುವುದಾಗಿ ಕಂಪನಿ ಪ್ರಚಾರ ಮಾಡಿದೆ.
ಬೆಂಗಳೂರು ವಿಳಾಸ ಹೊಂದಿದ ಆ ಕಂಪನಿಗೆ ಫೋನ್ ಮಾಡಿದಾಗ ಅಲ್ಲಿ ಕನ್ನಡದಲ್ಲಿ ಮಾತನಾಡುವವರೇ ಇರಲಿಲ್ಲ. ಹಿಂದಿಯಲ್ಲಿ ಪ್ರಶ್ನಿಸಿದಾಗ `ಹಣ ಪಾವತಿಸಿದರೂ ಪೂಜೆಯ ವೇಳೆ ಪ್ರವೇಶ ನಿಷಿದ್ಧ’ ಎಂಬ ಮಾಹಿತಿ ನೀಡಿದರು. `ಆನ್ಲೈನ್ ಮೂಲಕ ಮಾತ್ರ ಪೂಜೆ ವೀಕ್ಷಿಸಿ, ಕೋರಿಯರ್ ಮೂಲಕ ಪ್ರಸಾದ ಸ್ವೀಕರಿಸಿ’ ಎಂದಷ್ಟೇ ಹೇಳಿದರು. `ಇದೇ ನಮ್ಮ ಕಂಪನಿ ನಿಯಮ’ ಎನ್ನುತ್ತ ಜಾರಿಕೊಂಡರು.
`ನೇರವಾಗಿ ಅಗಲಿದ ಆತ್ಮಕ್ಕೆ ಶಾಂತಿ ಕೊಡಿಸುವ ಆನ್ಲೈನ್ ಸೇವೆ’ ಎಂದು ಕಂಪನಿ ಪ್ರಚಾರ ಮಾಡಿದ್ದು, ಆ ಕಂಪನಿ ನೀಡುವ ಪ್ರಸಾದ ಪೆಟ್ಟಿಗೆ ಸಹ ಗೋಕರ್ಣ ಪ್ರಸಾದವಲ್ಲ. `ಮುಕ್ತಿಗಾಗಿ ಕಾಯುತ್ತಿರುವ ಪೂರ್ವಜರ ಆತ್ಮಗಳಿಗೆ ಪ್ರಾರ್ಥನೆ ಸಲ್ಲಿಸುವ ಕಂಪನಿಗೆ ಮುಕ್ತಿ ಕೊಡಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
