ದಿಢೀರ್ ದುಡ್ಡು ಮಾಡುವುದಕ್ಕಾಗಿ ಜೂಜಾಟದ ಹಾದಿ ಹಿಡಿದ ಕೂಲಿ ಕಾರ್ಮಿಕರ ವಿರುದ್ಧ ಕಾರವಾರ ಹಾಗೂ ಮುಂಡಗೋಡು ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಅಂದರ್ ಬಾಹರ್ ಆಡುವಾಗ ಸಿಕ್ಕಿಬಿದ್ದ ಎಲ್ಲರೂ ಕಟ್ಟಡ ಕಾರ್ಮಿಕರಾಗಿದ್ದಾರೆ.
ಅಗಸ್ಟ 11ರ ರಾತ್ರಿ ಮುಂಡಗೋಡು ವಡ್ಡರ್ ಓಣಿಯ ಬೀದಿ ದೀಪದ ಕೆಳಗೆ ಅಂದರ್ ಬಾಹರ್ ಆಟ ಜೋರಾಗಿತ್ತು. ಈ ವಿಷಯ ಅರಿತ ಮುಂಡಗೋಡು ಪಿಎಸ್ಐ ಪರಶುರಾಮ ಮಿರ್ಚಗಿ ತಮ್ಮ ತಂಡದ ಜೊತೆ ಅಲ್ಲಿ ಹೋದರು. ಮುಂಡಗೋಡಿನ ಲಮಾಣಿ ತಾಂಡಾದ ಗಾರೆ ಕೆಲಸ ಮಾಡುವ ಸುನೀಲ ಲಮಾಣಿ, ಸುಭಾಷ ನಗರದ ಗೌಂಡಿ ಗೋಪಾಲ ಬೋವಿ, ವಡ್ಡರ ಓಣಿಯ ಗೌಂಡಿ ಕುಮಾರ ಬೋವಿ, ಕಾಳಗಿನಕೊಪ್ಪದ ನಾಗೇಂದ್ರ ಬೋವಿ, ಲಮಾಣಿತಾಂಡಾದ ಸಂತೋಷ ಲಮಾಣಿ ಸಿಕ್ಕಿಬಿದ್ದರು. ಆ ಆಟಗಾರರು ಚಾಪೆ ಅಡಿ ಅವಿತಿಟ್ಟಿದ್ದ 5510ರೂ ಹಣದ ಜೊತೆ ಇನ್ನಿತರ ಪರಿಕ್ಕರಗಳನ್ನು ಪೊಲೀಸರು ವಶಕ್ಕೆಪಡೆದರು.
ಕಾರವಾರದ ದೇವಳಿವಾಡ ದುರ್ಗಾ ದೇವಸ್ಥಾನದ ಎದುರು ಅಗಸ್ಟ 11ರ ರಾತ್ರಿ ಜೋರು ಜೂಜಾಟ ನಡೆಯುತ್ತಿತ್ತು. ಮಾಲಾದೇವಿ ಮೈದಾನ ಬಳಿಯ ಕೂಲಿ ಕೆಲಸದಾಳು ಸುರೇಶ ಅಣ್ಣಪ್ಪನವರ್, ಮಾರಿಯಾನಗರದ ಮೋಹನ ಗುನಗಿ ಅವರ ಮನೆಯಲ್ಲಿ ಬಾಡಿಗೆಗಿರುವ ಬಾದಾಮಿಯ ಕಾಂಕ್ರೆಟ್ ಕೆಲಸದ ಮಹಾಳಿಂಗರಾಯ ಘಂಟಿ, ನಂದನಗದ್ದಾ ನಾಗನಾಥ ದೇವಾಲಯದ ಬಳಿ ವಾಸಿಸುವ ಬಸವರಾಜ ಕೋನಿ, ಕೋಡಿಭಾಗ ಕನ್ನಡ ಶಾಲೆ ಬಳಿ ವಾಸಿಸುವ ಮುತ್ತಪ್ಪ ಚೌಹಾಣ ಹಾಗೂ ಗುನಗಿವಾಡದ ಕೆಎಚ್ಬಿ ಕಾಲೋನಿ ಬಳಿಯ ದಿಗಂಬರವಾಡ ನೀರಿನ ಟಾಕಿ ಹತ್ತಿರದ ಮಲ್ಲಪ್ಪ ಹಳ್ಳೂರು ಇಲ್ಲಿ ಇಸ್ಪಿಟ್ ಆಡುತ್ತಿದ್ದರು.
ಕಾರವಾರ ಪಿಎಸ್ಐ ಉದ್ದಪ್ಪ ಧರಪ್ಪನವರ್ ದಾಳಿ ನಡೆಸಿ ಆ ಜೂಜುಕೋರರ ಹೆಡೆಮುರಿ ಕಟ್ಟಿದರು. 13950ರೂ ಹಣದ ಜೊತೆ ಜೂಜಾಟಗಾರರು ಬಳಸಿದ್ದ ಬೆಡ್ಶೀಟ್, ಇಸ್ಪಿಟ್ ಎಲೆ ಸೇರಿ ಇನ್ನಿತರ ಪರಿಕ್ಕರಗಳನ್ನು ವಶಕ್ಕೆಪಡೆದರು. ಕಾರವಾರ ಹಾಗೂ ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಜೂಜಾಟಗಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
