ಅಡಿಕೆ ಕೊಯ್ಲಿಗಾಗಿ ಹೊನ್ನಾವರದಲ್ಲಿ ಮರ ಏರಿದ್ದ ಮಂಜು ಗೌಡ ಮರದಿಂದ ಬಿದ್ದು ಸಾವನಪ್ಪಿದ್ದಾರೆ. ಅಡಿಕೆ ಮರದ ಬುಡದಲ್ಲಿ ಗಾಯಗೊಂಡು ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಬದುಕಿಸಿಕೊಳ್ಳಲು ಆಗಲಿಲ್ಲ.
ಹೊನ್ನಾವರದ ಕೆಳಗಿನಮೂಡ್ಕಣಿಯ ಕೆರವಳ್ಳಿಯಲ್ಲಿ ಮಂಜು ಗೌಡ (45) ಅವರು ವಾಸವಾಗಿದ್ದರು. ಕೂಲಿ ಜೊತೆ ಕೃಷಿ ಕೆಲಸವನ್ನು ಮಾಡಿಕೊಂಡಿದ್ದ ಅವರು ಅವಿಭಕ್ತ ಕುಟುಂಬಕ್ಕೆ ಆಧಾರ ಸ್ಥಂಬದ ಹಾಗಿದ್ದರು. ಅಡಿಕೆ ಜೊತೆ ತೆಂಗಿನ ತೋಟವನ್ನು ಮಾಡಿದ್ದ ಅವರು ಅಚ್ಚುಕಟ್ಟಾಗಿ ಅವನ್ನು ನಿರ್ವಹಿಸುತ್ತಿದ್ದರು. ಅಗಸ್ಟ 13ರ ಬೆಳಗ್ಗೆ 7 ಗಂಟೆಗೆ ಅವರು ತೋಟಕ್ಕೆ ಹೋಗಿದ್ದರು.
ತೋಟಕ್ಕೆ ಹೋಗುವ ಮುನ್ನ ಅಡಿಕೆ ಕೊನೆ ಕೊಯ್ಯುವುದಾಗಿ ಮನೆಯಲ್ಲಿ ಹೇಳಿದ್ದರು. 8 ಗಂಟೆ ವೇಳೆಗೆ ಅವರು ಮನೆಗೆ ಮರಳಬೇಕಿತ್ತು. ಆದರೆ, ಮಂಜು ಗೌಡ ಅವರು ಮರಳದ ಕಾರಣ ಪತ್ನಿ ವೀಣಾ ಗೌಡ ಅವರು ಹುಡುಕಾಟ ಶುರು ಮಾಡಿದರು. ಮನೆ ಸದಸ್ಯ ಯೋಗೇಶ ಗೌಡರ ಜೊತೆ ತೋಟಕ್ಕೆ ಹೋದಾಗ ಅಲ್ಲಿ ಮಂಜು ಗೌಡ ಅವರು ಮರದ ಅಡಿ ಬಿದ್ದಿರುವುದು ಕಾಣಿಸಿತು.
ಮರದಿಂದ ಬಿದ್ದ ಮಂಜು ಗೌಡ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಯೋಗೇಶ ಗೌಡ ಹಾಗೂ ವೀಣಾ ಗೌಡ ಸೇರಿ ಅವರನ್ನು ಉಪಚರಿಸಿದರು. ಆದರೆ, ಮಂಜು ಗೌಡ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ರಿಕ್ಷಾವೊಂದರ ಮೂಲಕ ಮಂಜು ಗೌಡ ಅವರನ್ನು ಕುಟುಂಬದವರು ಸೆಂಟ್ ಇಗ್ನೋಶಿಯನ್ ಆಸ್ಪತ್ರೆಗೆ ಕರೆ ತಂದರು.
ಅಷ್ಟೊತ್ತಿಗೆ 9.30ರ ಸಮಯವಾಗಿದ್ದು, ದಾರಿ ಮದ್ಯೆಯೇ ಮಂಜು ಗೌಡ ಸಾವನಪ್ಪಿದ ಬಗ್ಗೆ ವೈದ್ಯರು ಘೋಷಿಸಿದರು. ಚಿಕ್ಕಪ್ಪನ ಸಾವಿನ ಬಗ್ಗೆ ಯೋಗೇಶ ಗೌಡ ಅವರು ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.
ಗಮನಿಸಿ: ಮಳೆಗಾಲದಲ್ಲಿ ಮರ ಹತ್ತುವ ಸಾಹಸ ಮಾಡದಿರಿ. ಸುರಕ್ಷತ ಅಡಿಕೆ ಕೊಯ್ಲಿಗೆ ದೋಟಿ ಬಳಸಿ
