ಯಲ್ಲಾಪುರದ ಮಂಚಿಕೇರಿ ಕಾಡು ದಾಟಿ ಬೇಡ್ತಿ ನದಿ ಸೇರುವ ಕವಲಗಿ ಬಳಿ ಮೀನು ಹಿಡಿಯಲು ಹೋಗಿ ಕೊಚ್ಚಿ ಹೋಗಿದ್ದ ಸಹೋದರರ ಶವ ಸಿಕ್ಕಿದೆ. ನಿರಂತರ ಶೋಧದ ನಂತರ ಇಬ್ಬರು ನೀರಿನ ಆಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಅಗಸ್ಟ 10ರಂದು 8 ಜನ ಕವಲಗಿ ಹಳ್ಳ ದಾಟಿ ಬೇಡ್ತಿ ನದಿಗೆ ಮೀನು ಹಿಡಿಯಲು ಹೋಗಿದ್ದರು. ಮೀನು ಹಿಡಿದು ಮರಳುವಾಗ ಕವಲಗಿ ಹಳ್ಳ ಉಕ್ಕಿ ಹರಿದಿದ್ದು, ಆ ವೇಳೆ ಹನೀಪ ಹಾಗೂ ರಫಿಕ್ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಧಾರಾಕಾರ ಮಳೆ, ಮೂಲಭೂತ ಸೌಕರ್ಯ ಕೊರತೆ, ಅಗತ್ಯ ಸಲಕರಣೆಗಳ ಅಭಾವದ ನಡುವೆಯೂ ಊರಿನವರ ಸಹಕಾರದಲ್ಲಿ ಶವ ಶೋಧ ಕಾರ್ಯಾಚರಣೆ ನಡೆಯಿತು.
ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ನಿರಂತರ ಶೋಧ ನಡೆಸಿದ್ದರಿಂದ ಮರುದಿನ ರಫಿಕ್ ಅವರ ಶವ ನೀರಿನ ಆಳದಲ್ಲಿ ಸಿಕ್ಕಿತ್ತು. ಶೋಧ ಮುಂದುವರೆದಿದ್ದು, ಬುಧವಾರ ಹನೀಫ ಅವರ ಶವವೂ ಸಿಕ್ಕಿತು.
ಅವಘಡ ನಡೆದ 300ಮೀಟರ್ ದೂರದಲ್ಲಿ ರಫಿಕ್ ಶವ ಕಾಣಿಸಿದ್ದು, ಅದನ್ನು ಪೊಲೀಸರು ಸಾಹಸದಿಂದ ದಡಕ್ಕೆ ತಂದಿದ್ದರು. ಬುಧವಾರ 1.5ಕಿಮೀ ದೂರದಲ್ಲಿ ಹನಿಫ್ ಶವ ಕಾಣಿಸಿದೆ. ನೀರಿನೊಳಗಿನ ಕೆಲ ಜಲಚರಗಳು ದೇಹವನ್ನು ಕಚ್ಚಿವೆ.
ನೀರಿನಲ್ಲಿ ಅವಿತಿದ್ದ ಶವ ಉಬ್ಬಿಕೊಂಡಿದ್ದು, ಕಾರ್ಯಾಚರಣೆಯಲ್ಲಿದವರು ಕುಟುಂಬದವರಿಗೆ ಶವ ಹಸ್ತಾಂತರಿಸಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬದಲ್ಲಿ ಶೋಕ ಆವರಿಸಿದೆ.
ಗಮನಿಸಿ: ಮಳೆಗಾಲದ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಿ. ಅಪಾಯಕಾರಿ ಸ್ಥಳದಿಂದ ದೂರವಿರಿ
