`ಅಂಕೋಲಾ ತಾಲೂಕಿನ ಕೇಣಿ, ಬಾವಿಕೇರಿ ಹಾಗೂ ಅಲಗೇರಿ ಭಾಗದ ಜನರ ಅಭಿವೃದ್ಧಿಗಾಗಿ ವಾಣಿಜ್ಯ ಬಂದರು ನಿರ್ಮಿಸಬೇಕು. ಆ ಮೂಲಕ ಸ್ಥಳೀಯ ಅಭಿವೃದ್ಧಿ ಜೊತೆ ದುಡಿಯುವ ಕೈಗಳಿಗೂ ಯೋಗ್ಯ ಉದ್ಯೋಗ ಒದಗಿಸಬೇಕು’ ಎಂದು ಅಂಕೋಲಾ ತಾಲೂಕಾ ನಾಗರಿಕ ಸಮಿತಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
`ಅಂಕೋಲಾದ ಕೇಣಿಯಲ್ಲಿ ನಿರ್ಮಿಸುವ ಬಂದರಿಗೆ ನಮ್ಮ ವಿರೋಧವಿಲ್ಲ. ಬಂದರು ಚಟುವಟಿಕೆಗೆ ಬೆಂಬಲವಾಗಿ ನಾವಿದ್ದೇವೆ’ ಎಂದು ಆ ಸಮಿತಿಯವರು ಹೇಳಿದ್ದಾರೆ. `ಈ ಹಿಂದೆ ಟಾಟಾ ಕಂಪನಿಯವರು ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಆಸಕ್ತಿವಹಿಸಿದ್ದರು. ಆದರೆ, ಕೆಲ ಪರಿಸರವಾದಿಗಳು ಅವರನ್ನು ಓಡಿಸಿದರು. ಪರಿಣಾಮ ಸ್ಥಳೀಯ ಜನ ಈಗಲೂ ಉದ್ಯೋಗವಿಲ್ಲದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಸದ್ಯ ಖಾಸಗಿ ಬಂದರು ನಿರ್ಮಾಣಕ್ಕೆ ವಿರೋಧವ್ಯಕ್ತಪಡಿಸಿದರೆ ಈ ಸಮಸ್ಯೆ ಇನ್ನಷ್ಟು ಉಲ್ಬಣವಾಗಲಿದೆ’ ಎಂದು ನಾಗರಿಕ ಸಮೀತಿಯವರು ಆತಂಕವ್ಯಕ್ತಪಡಿಸಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯ ಜನ ಅನೇಕ ಯೋಜನೆಗಳಿಗೆ ಭೂಮಿ ಬಿಟ್ಟು ಕೊಟ್ಟಿದ್ದಾರೆ. ಆದರೆ, ಇಲ್ಲಿನ ಜನರ ಸಮಸ್ಯೆ ಬಗೆಹರಿಸಲು ಯಾವ ದೊಡ್ಡ ಯೋಜನೆಯೂ ನೆರವಾಗಿಲ್ಲ. ಸದ್ಯ ಜೆಎಸ್ಡಬ್ಲು ಕಂಪನಿ ಮೂಲಕ ಕೇಣಿಯಲ್ಲಿ ಬಂದರು ನಿರ್ಮಿಸಲು ಉದ್ದೇಶಿಸಲಾಗಿದ್ದು, ಸಾರ್ವಜನಿಕ ಹಿತಕ್ಕಾಗಿ ಬಂದರು ನಿರ್ಮಾಣ ಆಗಲೇಬೇಕು’ ಎಂದವರು ಹೇಳಿದ್ದಾರೆ.
`ಬಂದರು ನಿರ್ಮಾಣದಿಂದ ಸ್ಥಳೀಯ ಪದವಿಧರರಿಗೆ ಉದ್ಯೋಗ ಸಿಗಲಿದೆ. ರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ದೂರವಾಗಲಿದೆ. ಸ್ಥಳೀಯ ವ್ಯಾಪಾರಿ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಸಾರಿಗೆ ಸಂಪರ್ಕ ಸುಧಾರಣೆ ಜೊತೆ ಆಮದು-ರಪ್ತು ವ್ಯವಹಾರ ಹೆಚ್ಚಳವಾಗಲಿದೆ. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಜೊತೆ ಬಂದರು ಸಂಪರ್ಕ ಆದರೆ ರೈತರ ಬೆಳೆಗಳಿಗೂ ಉತ್ತಮ ಬೆಲೆ ಸಿಗಲಿದೆ’ ಎಂದು ನಾಗರಿಕ ಸಮಿತಿ ಸದಸ್ಯರು ವಿವರಿಸಿದ್ದಾರೆ.
ಇದರೊಂದಿಗೆ `ಬಂದರು ನಿರ್ಮಾಣದ ನಂತರ ಇನ್ನಷ್ಟು ಕಂಪನಿಗಳು ಜಿಲ್ಲೆಯಲ್ಲಿ ಕೈಗಾರಿಕೆ ಶುರು ಮಾಡಲಿವೆ. ಅದರಿಂದಲೂ ಆರ್ಥಿಕ ಅಭಿವೃದ್ಧಿ ಸಾಧ್ಯವಿದೆ. ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಕೌಶಲ್ಯ ತರಬೇತಿ, ಉದ್ದಿಮೆ, ವ್ಯಾಪಾರ ಸೇರಿ ಅನೇಕ ಬಗೆಯಲ್ಲಿ ಜನರಿಗೆ ಅನುಕೂಲಕರ ಸೌಲಭ್ಯ ಬಂದರಿನಿAದ ಸಿಗಲಿದೆ. ಹೀಗಾಗಿ ವಿರೋಧಗಳಿಗೆ ತಲೆಕೆಡಿಸಿಕೊಳ್ಳದೇ ಬಂದರು ನಿರ್ಮಾಣ ಕೆಲಸ ಮಾಡಬೇಕು’ ಎಂದು ನಾಗರಿಕ ಸಮಿತಿಯವರು ಈ ಪತ್ರದ ಮೂಲಕ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಸಮಿತಿ ಪ್ರಮುಖರಾದ ಮಂಜುನಾಥ ನಾಯಕ, ಬೀರಣ್ಣ ನಾಯಕ, ನಾಗೇಶ ಗುನಗಾ, ಸಂದೀಪ ಗೌಡ, ಕೇಶವ ಗೌಡ, ನಾರಾಯಣ ನಾಯ್ಕ, ಅಮಿತ್ ನಾಯ್ಕ, ಸಂದೇಶ ನಾಯ್ಕ ಇನ್ನಿತರ ಹೆಸರಿನ ಜೊತೆ ಈ ಮನವಿ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದೆ.
