ಕರಾವಳಿಯಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಸುತ್ತಿರುವ ಐಆರ್ಬಿ ಕಂಪನಿ ಹೊನ್ನಾವರದಲ್ಲಿ ರಸ್ತೆ ಜೋಡಣೆ ಕೆಲಸ ಸರಿಯಾಗಿ ಮಾಡಿಲ್ಲ. ಇದರಿಂದ ಆ ಭಾಗದಲ್ಲಿ ಓಡಾಡುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
`ಗುತ್ತಿಗೆ ಕಂಪನಿ ನಿರ್ಲಕ್ಷದಿಂದ ಅಪಘಾತ ಪ್ರಮಾಣ ಹೆಚ್ಚಾಗಿದ್ದು, ಇಲ್ಲಿ ರಸ್ತೆ ಜೋಡಣೆ ಕೆಲಸ ಸರಿಯಾಗಿ ಮಾಡಬೇಕು’ ಎಂದು ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ. `ಇಲ್ಲಿ ರಸ್ತೆ ಪಕ್ಕ ಜಲ್ಲಿ ಹಾಕಿ ಹಾಗೇ ಬಿಡಲಾಗಿದೆ. ಹೊಂಡಗಳನ್ನು ಸರಿಯಾಗಿ ತುಂಬಿಲ್ಲ. ಅರೆಬರೆ ಕಾಮಗಾರಿಯಿಂದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ’ ಎಂದು ಕೇಂದ್ರದ ಅಧ್ಯಕ್ಷ ಆಗ್ನೆಲ್ ರೋಡ್ರಿಗಸ್ ಸರ್ಕಾರದ ಗಮನ ಸೆಳೆದಿದ್ದಾರೆ.
`ಹೊನ್ನಾವರ ಪೊಲೀಸ್ ಠಾಣೆಯಿಂದ ಶರಾವತಿ ಸರ್ಕಲ್ವರೆಗೆ ಎರಡು ಕಡೆ ರೇಡಿಯಂ ಅಂಟಿಸಿದ ಬೇರಿಕೆಡ್ ಅಳವಡಿಸಬೇಕು. ರಾತ್ರಿ ಸಮಯದಲ್ಲಿ ಬರುವ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ. `ಸರ್ಕಾರಕ್ಕೆ ಪ್ರತಿಯೊಬ್ಬರು ತೆರಿಗೆ ಕಟ್ಟುತ್ತಿದ್ದು, ಆ ತೆರಿಗೆ ಹಣ ಸದುಪಯೋಗವಾಗಬೇಕು. ಸುರಕ್ಷತೆ ಕಾಪಾಡುವ ವಿಷಯದಲ್ಲಿ ಬೇಜವಬ್ದಾರಿ ಮಾಡಬಾರದು’ ಎಂದವರು ಹೇಳಿದ್ದಾರೆ. `ತುರ್ತು ಕ್ರಮ ಕೈಗೊಳ್ಳದೇ ಇದ್ದರೆ ಈ ಬಗ್ಗೆ ಹೋರಾಟ ನಡೆಸುವೆ’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಎಚ್ಚರಿಸಿದ್ದಾರೆ.
