`ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಸರ್ಕಾರಕ್ಕೆ ನೀಡಿದ ಒಳ ಮೀಸಲಾತಿ ವರದಿ ಬೋವಿ ಸಮುದಾಯಕ್ಕೆ ಅನ್ಯಾಯವಾಗುವ ರೀತಿಯಲ್ಲಿದ್ದು, ಅದನ್ನು ಸರ್ಕಾರ ತಿರಸ್ಕರಿಸಬೇಕು’ ಎಂದು ಎಂದು ಬೋವಿ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣ ಹೀರೆಹಳ್ಳಿ ಆಗ್ರಹಿಸಿದ್ದಾರೆ.
ಯಲ್ಲಾಪುರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು `ನಾಗಮೋಹನದಾಸ್ ವರದಿ ಜಾರಿಗೆ ಬಂದರೆ ಹಲವು ಸಮುದಾಯಗಳಿಗ ನ್ಯಾಯ ಸಿಗುವುದಿಲ್ಲ. ಕೇಂದ್ರ ಸರ್ಕಾರದ 2026ರ ಜನ ಗಣತಿ ಆಧಾರದ ಮೇಲೆ ಒಳ ಮೀಸಲಾತಿ ನೀಡುವ ನಿಟ್ಟಿನಲ್ಲಿ ವರದಿ ಸಲ್ಲಿಕೆಯಾಗಬೇಕು’ ಎಂದು ಆಗ್ರಹಿಸಿದರು.
`ರಾಜ್ಯ ಸರ್ಕಾರ ಮಾಡಿದ ಜಾತಿ ಗಣತಿ ಪ್ರಕಾರ ಈ ವರದಿ ಜಾರಿಯಾದರೆ ಅನೇಕರಿಗೆ ಅನ್ಯಾಯವಾಗಲಿದೆ’ ಎಂದರು. ಜಿಲ್ಲಾ ಸಂಘದ ಮಾಜಿ ಉಪಾಧ್ಯಕ್ಷ ದ್ಯಾಮಣ್ಣ ಬೋವಿವಡ್ಡರ್ ಮಾತನಾಡಿ `ನಾಗಮೋಹನ ದಾಸ್ ವರದಿಯಲ್ಲಿ ಸಮಾಜದ ಉಪಜಾತಿಗಳನ್ನು ಕೈಬಿಡಲಾಗಿದೆ. ಪರಿಶಿಷ್ಟ ಜಾತಿಯಲ್ಲಿನ ಎಲ್ಲ 101 ಜಾತಿ ಸಮುದಾಯವರಿಗೂ ನ್ಯಾಯ ದೊರಕಿಸಿಕೊಡಬೇಕು’ ಎಂದರು.
ತಾಲೂಕು ಸಂಘದ ಅಧ್ಯಕ್ಷ ಫಕೀರಪ್ಪ ಬೋವಿವಡ್ಡರ್ ಮಾತನಾಡಿ `ನಮ್ಮ ಬೇಡಿಕೆಯನ್ನು ಪರಿಗಣಿಸಿ ನ್ಯಾಯ ದೊರಕದೇ ಇದ್ದಲ್ಲಿ ಬೋವಿ ಪೀಠದ ಶ್ರೀಗಳ ನೇತೃತ್ವದಲ್ಲಿ ಪ್ರತಿಭಟನೆ ಅನಿವಾರ್ಯ’ ಎಂದು ಎಚ್ಚರಿಸಿದರು. ಸಂಘದ ಪ್ರಮುಖರಾದ ನಾಗೇಶ ಬೋವಿವಡ್ಡರ್, ಫಕಿರಪ್ಪ ಬೋವಿವಡ್ಡರ್, ಮಾರುತಿ ಬೋವಿವಡ್ಡರ್, ನಾಗರಾಜ ಬೋವಿವಡ್ಡರ್ ಇತರರಿದ್ದರು.
