ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಕೋಟಿ ರೂ ನಗದು ಹಾಗೂ ಚಿನ್ನವನ್ನು ವಶಕ್ಕೆಪಡೆದಿದ್ದಾರೆ. ಜೊತೆಗೆ ಅವರ ಬ್ಯಾಂಕ್ ಖಾತೆಯನ್ನು ಜಪ್ತು ಮಾಡಿದ್ದಾರೆ. ಆರೋಗ್ಯದಲ್ಲಿ ಏರುಪೇರಾಗಿ ಆಘಾತಕ್ಕೆ ಒಳಗಾಗಿರುವ ಸತೀಶ್ ಸೈಲ್ ಆಸ್ಪತ್ರೆ ಸೇರಿದ್ದಾರೆ.
ಸತೀಶ್ ಸೈಲ್ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ಮಾಧ್ಯಮದವರಿಗೆ ಸಚಿವ ಮಂಕಾಳು ವೈದ್ಯ ಪ್ರತಿಕ್ರಿಯಿಸಿದ್ದು, `ಸತೀಶ್ ಸೈಲ್ ದೆಹಲಿಯಲ್ಲಿ ಆಸ್ಪತ್ರೆಯಲ್ಲಿದ್ದಾರೆ. ಅವರ ಆರೋಗ್ಯ ಮೊದಲು ಸುಧಾರಣೆ ಆಗಲಿ’ ಎಂದು ಹೇಳಿದ್ದಾರೆ. `ಸತೀಶ್ ಸೈಲ್ ದುಡ್ಡು ಮಾಡಲು ರಾಜಕೀಯಕ್ಕೆ ಬಂದವರಲ್ಲ. ಅವರದ್ದು ರಿಯಲ್ ಎಸ್ಟೇಟ್ ಸೇರಿ ಹಲವು ಬ್ಯುಸಿನೆಸ್ ಇದೆ. ಎಲ್ಲಾ ಹಣಕಾಸಿಗೂ ಅವರು ಲೆಕ್ಕ ಕೊಡಲಿದ್ದಾರೆ’ ಎಂದು ಸಚಿವರು ಶಾಸಕರನ್ನು ಸಮರ್ಥಿಸಿಕೊಂಡರು.
`ಸತೀಶ್ ಸೈಲ್ 500 ಕೋಟಿ ವ್ಯವಹಾರದ ತೆರಿಗೆ ಫೈಲ್ ಮಾಡಿದ್ದು, 150 ಕೋಟಿ ರೂ ತೆರಿಗೆ ಪಾವತಿ ಮಡಿದ್ದಾರೆ. ಅದಾಗಿಯೂ ಅವರ ಮೇಲೆ ಇಡಿ ದಾಳಿ ನಡೆದಿದ್ದು ಬೇಸರ ತಂದಿದೆ’ ಎಂದರು. `ಇಡೀ ದೇಶದಲ್ಲಿ ಇಡಿ ದಾಳಿ ಆಗುತ್ತದೆ. ಕಾಂಗ್ರೆಸ್ ಶಾಸಕರಿಗೆ ತೊಂದರೆ ಕೊಡುವುದೇ ಬಿಜೆಪಿ ಕೆಲಸವಾಗಿದ್ದು, ಇಲ್ಲಿಯೂ ಅದೇ ಪ್ರಯತ್ನ ನಡೆದಿದೆ’ ಎಂದು ದೂರಿದರು.
`ಕಾಂಗ್ರೆಸ್ಸಿಗರ ಮೇಲೆ ಮಾತ್ರ ದಾಳಿ ನಡೆಯುತ್ತದೆ. ಚುನಾವಣೆಯಲ್ಲಿ ಗೆಲ್ಲುವವರ ಮೇಲೆ ಪ್ರಹಾರ ನಡೆಯುತ್ತಿದೆ. ಕಾಂಗ್ರೆಸ್ಸಿಗರು ತೊಂದರೆಗೆ ಒಳಗಾದಾಗ ಬಿಜೆಪಿಗೆ ಹೋಗಿ ನಂತರ ಕ್ಲೀನ್‌ಚೀಟ್ ಪಡೆದು ಮರಳಿದ ಉದಾಹರಣೆಯಿದೆ. ಇಲ್ಲಿಯೂ ಅದೇ ಪ್ರಯತ್ನ ನಡೆದಿರಬಹುದು’ ಎಂದರು. `ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಿಲ್ಲ. ಮೊದಲು ಎರಡು ಶಾಸಕರಿದ್ದು, ಇದೀಗ ಒಬ್ಬರೇ ಆಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಶಾಸಕರನ್ನು ಗುರಿಯಾಗಿರಿಸಿಕೊಂಡು ಇಡಿ ದಾಳಿ ನಡೆಯುತ್ತಿದೆ’ ಎಂದು ದೂರಿದರು.
Discussion about this post