ಬಾಗಲಕೋಟೆಯಿಂದ ಧರ್ಮಸ್ಥಳದ ಕಡೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಯಲ್ಲಾಪುರದಲ್ಲಿ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಬಸ್ಸಿನಲ್ಲಿದ್ದ ಮೂವರು ಪ್ರಯಾಣಿಕರು ಸಾವನಪ್ಪಿದ್ದು, ಏಳು ಜನ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಅಗಸ್ಟ 15ರಂದು ಈ ಬಸ್ಸು ಬಾಗಲಕೋಟೆಯಿಂದ ಹೊರಟಿತ್ತು. ಆಲಮಟ್ಟಿಯ ಯಮನಪ್ಪ ಮಾಗಿ ಅವರು ಬಸ್ಸನ್ನು ಓಡಿಸುತ್ತಿದ್ದರು. ನಸುಕಿನಲ್ಲಿ ಈ ಬಸ್ಸು ಯಲ್ಲಾಪುರ ತಾಲೂಕು ಪ್ರವೇಶಿಸಿತು. ಮಾವಳ್ಳಿ ಬಳಿಯ ಹಿಟ್ಟಿನಬೈಲಿನಲ್ಲಿ ಕೇರಳದ ಲಾರಿ ಹೆದ್ದಾರಿ ಅಂಚಿನಲ್ಲಿ ನಿಂತಿದ್ದು, ಆ ಬಸ್ಸು ಲಾರಿಗೆ ಡಿಕ್ಕಿಯಾಯಿತು. ಈ ಡಿಕ್ಕಿಯ ರಭಸಕ್ಕೆ ಬಸ್ಸಿನಲ್ಲಿದ್ದ ಬಾದಾಮಿ ತಾಲೂಕಿನ ಗುಳೆದಗುಡ್ಡ ಗ್ರಾಮದ ನಿಲವ್ವ ಹರದೊಳ್ಳಿ (40), ಜಾಲಿಹಾಳ ಗ್ರಾಮದ ಗಿರಿಜವ್ವಾ ಬೂದನ್ನವರ (30) ಸಾವನಪ್ಪಿದರು. ಅವರ ಜೊತೆ ಮತ್ತೊಬ್ಬ ಪುರುಷ ಸಹ ಅಸುನೀಗಿದ್ದು, ಅವರ ಹೆಸರು ಗೊತ್ತಾಗಲಿಲ್ಲ.
ಇದರೊಂದಿಗೆ ಬಾಗಲಕೋಟೆಯ ಹುನಗುಂದದ ಚಿದಾನಂದ ರಮೇಶ ಕಿತ್ತಳಿ, ಅಮೀನಗಡದ ಮಲ್ಲಪ್ಪ ಯಮನಪ್ಪ ಕತ್ತಿ, ಮಂಜುಳಾ ಗಾಳೆಪ್ಪ ಹಳಬರ, ಮಲ್ಲಿಕಾರ್ಜುನ ಫಕೀರಪ್ಪ ಆಂದಲಿ, ದೇವಕಿ ಹನುಮಂತ ಬೆಳ್ಳಿ, ಗಿಡ್ಡನಾಯಕನಾಳದ ಸಮೀರಾಬೇಗಂ ಇಮಾಮ ಸಾಬ ಹೊಸಮನಿ, ರಕ್ಕಸಂಗಿಯ ಹನೀಫಾ ಮಹಮ್ಮದ್ ಅಲಿ ಬೇಗಂ ಸಹ ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಕೇರಳ ಮೂಲದ ಲಾರಿ ರಸ್ತೆಯಂಚಿನಲ್ಲಿ ಯಾವುದೇ ಲೈಟ್ ಇಲ್ಲದೇ ನಿಲ್ಲಿಸಿರುವುದು ಹಾಗೂ ಬಸ್ಸು ವೇಗವಾಗಿ ಬಂದಿರುವುದು ಈ ಅಪಘಾತಕ್ಕೆ ಕಾರಣ. ಅಪಘಾತದ ರಭಸಕ್ಕೆ ಬಸ್ ಒಂದು ಬಂದಿ ಸಂಪೂರ್ಣ ಜಖಂ ಆಗಿದೆ.
7 ಹಾಗೂ 12 ವರ್ಷದ ಚಿಕ್ಕ ಚಿಕ್ಕ ಮಕ್ಕಳಿಗೆ ಸಹ ಗಾಯವಾಗಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕ ಹಾಗೂ ನಿರ್ವಾಹಕ ಪ್ರಾಣ ಉಳಿಸಿಕೊಂಡಿದ್ದು, ಚಾಲಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಲ್ಲಾಪುರ ಸಿಪಿಐ ರಮೇಶ್ ಹಾನಾಪುರ, ಪಿಎಸ್‌ಐ ಯಲ್ಲಾಲಿಂಗ್ ಕುನ್ನೂರು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗಾಯಾಳುಗಳನ್ನ ಹುಬ್ಬಳ್ಳಿ ಆಸ್ಪತ್ರೆಗೆ ಸಾಗಿಸುವಲ್ಲಿ ಸಿಪಿಐ ರಮೇಶ್ ಹಾನಾಪುರ ನೆರವಾದರು. ಮೃತ ದೇಹಗಳನ್ನು ಪಿಎಸ್‌ಐ ಯಲ್ಲಾಲಿಂಗ ಕುನ್ನೂರು ಅವರು ಶವಾಗಾರಕ್ಕೆ ಸಾಗಿಸುವ ಕಾರ್ಯದಲ್ಲಿ ಕಾಣಿಸಿಕೊಂಡರು.
Discussion about this post