ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್ ಅವರು ತಮ್ಮ ಸ್ವ ಕ್ಷೇತ್ರದ ಕಾರ್ಯಕ್ರಮ ಆಯೋಜನೆಗೆ ಮಾತ್ರ ಸೀಮಿತವಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿ ಶಿರಸಿಯಲ್ಲಿದ್ದರೂ ಜಿಲ್ಲಾ ಮಟ್ಟದ ಕಾರ್ಯಕ್ರಮಗಳು ಅಲ್ಲಿ ದೊಡ್ಡದಾಗಿ ನಡೆಯುತ್ತಿಲ್ಲ. ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರವಾಗಿದ್ದರೂ ಅಲ್ಲಿಯೂ ಕಾಂಗ್ರೆಸ್ ಸಭೆ ದೊಡ್ಡ ಪ್ರಮಾಣದಲ್ಲಿ ಆಗಿಲ್ಲ. ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಊರು ಭಟ್ಕಳದಲ್ಲಿಯೂ ಕಾಂಗ್ರೆಸ್ಸಿನ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಅಲ್ಲಿ ಆಯೋಜಿಸಲು ಅಧ್ಯಕ್ಷರು ಆಸಕ್ತರಾಗಿಲ್ಲ. ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಅವರ ಹಳಿಯಾಳ ಕ್ಷೇತ್ರದಲ್ಲಿ ಸಹ ಕಾಂಗ್ರೆಸ್ ಜಿಲ್ಲಾ ಮಟ್ಟದ ಕಾರ್ಯಕಾರಣಿ ಸಭೆ ಆಯೋಜಿಸುತ್ತಿಲ್ಲ.
ನಿರಂತರವಾಗಿ ಕಳೆದ ನಾಲ್ಕು ಜಿಲ್ಲಾಮಟ್ಟದ ಕಾಂಗ್ರೆಸ್ ಕಾರ್ಯಕ್ರಮಗಳು ಅಂಕೋಲಾದಲ್ಲಿ ನಡೆದಿದೆ. ದೂರದಿಂದ ಬರುವ ಕಾಂಗ್ರೆಸ್ ಕಾರ್ಯಕರ್ತರು ಇದರಿಂದ ಸಿಡಿಮಿಡಿಗೊಂಡಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಶಾಸಕರಿದ್ದಾರೆ. ಕುಮಟಾದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದು, ಅಂಕೋಲಾ ಬದಲು ಅಲ್ಲಾದರೂ ಜಿಲ್ಲಾಮಟ್ಟದ ಕಾರ್ಯಕಾರಣಿ ಸಭೆ ನಡೆದರೆ ಪಕ್ಷ ಸಂಘಟನೆಗೆ ಅನುಕೂಲ’ ಎಂಬುದು ಆ ಭಾಗದ ಕಾರ್ಯಕರ್ತರ ಮನದಾಳ. `ಉತ್ತರ ಕನ್ನಡ ಜಿಲ್ಲಾಕೇಂದ್ರ ಕಾರವಾರ ಆಗಿದ್ದರಿಂದ ಅಲ್ಲಾದರೂ ಕಾಂಗ್ರೆಸ್ ಸಭೆ ನಡೆಸಬೇಕು. ಅದನ್ನು ಬಿಟ್ಟು ಅಂಕೋಲಾಗೆ ಮಾತ್ರ ಸೀಮಿತವಾಗಿರುವುದು ಸರಿಯಲ್ಲ’ ಎಂಬುದು ಅನೇಕರ ಮಾತು.
`ಉತ್ತರ ಕನ್ನಡ ಜಿಲ್ಲೆಗೆ ಯಲ್ಲಾಪುರ ಸಹ ಮಧ್ಯವರ್ತಿ ಸ್ಥಳ. ಎಲ್ಲಾ ಭಾಗದ ಕಾರ್ಯಕರ್ತರಿಗೂ ಇಲ್ಲಿ ಬರುವುದು ಅನುಕೂಲ. ಜೊತೆಗೆ ಬಿಜೆಪಿಯಿಂದ ಗೆದ್ದಿದ್ದ ಶಾಸಕ ಶಿವರಾಮ ಹೆಬ್ಬಾರ್ ಇದೀಗ ಕಾಂಗ್ರೆಸ್ ಕಡೆ ಒಲವು ತೋರಿದ್ದರಿಂದ ಯಲ್ಲಾಪುರದಲ್ಲಿಯೂ ಕಾಂಗ್ರೆಸ್ ಸಭೆ ಆಯೋಜನೆ ಮೂಲಕ ಪಕ್ಷ ಸಂಘಟನೆಗೆ ಪೂರಕ ವಾತಾವರಣವಿದೆ’ ಎನ್ನುವವರು ಹೆಚ್ಚಿಗೆ ಇದ್ದಾರೆ.
`ಶಿವರಾಮ ಹೆಬ್ಬಾರ್ ಪುತ್ರ ವಿವೇಕ ಹೆಬ್ಬಾರ್ ಸಹ ಕೆಪಿಸಿಸಿಯ ಉನ್ನತ ಹುದ್ದೆಯಲ್ಲಿದ್ದು, ಮುಂಡಗೋಡು ಭಾಗದಲ್ಲಿ ಹಿಡಿತಹೊಂದಿದ್ದಾರೆ. ಹೀಗಾಗಿ ಮುಂಡಗೋಡದಲ್ಲಿಯೂ ಪಕ್ಷ ಸಂಘಟನೆಗಾಗಿ ಕಾರ್ಯಕಾರಣಿ ಸಭೆ ನಡೆಸಬೇಕು’ ಎಂಬ ಮಾತು ಕೇಳಿ ಬಂದಿದೆ. `ಜಿಲ್ಲೆಯ 12 ತಾಲೂಕುಗಳಲ್ಲಿಯೂ ಒಂದೊoದು ಸಭೆ ನಡೆಸಿದರೂ ಸಮಸ್ಯೆ ಇಲ್ಲ. ಜಿಲ್ಲಾಧ್ಯಕ್ಷರ ಊರಾದ ಅಂಕೋಲಾವನ್ನು ಮಾತ್ರ ಕೇಂದ್ರವನ್ನಾಗಿಸಿರಿಸಿಕೊAಡು ಜಿಲ್ಲಾಮಟ್ಟದ ಸಭೆ ನಡೆಸುವುದು ಸಮಂಜಸವಲ್ಲ’ ಎಂಬುದು ದೂರದೂರಿನ ಕಾರ್ಯಕರ್ತರ ಅಭಿಮತ. ಈ ಹಿಂದೆ ಅಂಕೋಲಾದ ಹೊಟೇಲ್ ಒಂದರಲ್ಲಿ ಕಾಂಗ್ರೆಸ್ ಕಾರ್ಯಕಾರಣಿ ಸಭೆ ನಡೆದಾಗ ಅಲ್ಲಿ ನಾಯಕರೇ ಬಂದಿರಲಿಲ್ಲ. ಕಾರ್ಯಕರ್ತರು ಸಹ ದೊಡ್ಡ ಪ್ರಮಾಣದಲ್ಲಿರಲಿಲ್ಲ. ಹೀಗಾಗಿ ಸಭೆಗಾಗಿ ಬಂದಿದ್ದ ಹಿರಿಯ ನಾಯಕರು ಅಸಮಧಾನವ್ಯಕ್ತಪಡಿಸಿ ಗರಂ ಆಗಿದ್ದರು. ಅದಾಗಿಯೂ ಮತ್ತೆ ಅಂಕೋಲಾದಲ್ಲಿಯೇ ಕಾರ್ಯಕಾರಣಿ ಸಭೆ ನಡೆಸಲಾಗಿದೆ.
