ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಾರವಾರದ ಅಮದಳ್ಳಿಯಲ್ಲಿರುವ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶೇಷ ಅಲಂಕಾರ ಕಾಣಿಸಿದ್ದು, ಅಲ್ಲಿನ ಪುಠಾಣಿಗಳು ರಾಧಾ-ಕೃಷ್ಣರ ವೇಷಧರಿಸಿ ಫೋಟೋ ಕ್ಲಿಕ್ಕಿಸಿಕೊಂಡರು. ಮಕ್ಕಳ ಕಲರವ ನೋಡಿದ ಪಾಲಕರು-ಶಿಕ್ಷಕರು ಸಂತಸ ಹಂಚಿಕೊoಡರು.
ಈ ವೇಳೆ ಶಾಲೆಯ ಪ್ರಾಚಾರ್ಯೆ ನಾಗರತ್ನ ಅವರು ಮಕ್ಕಳಿಗೆ ಕೃಷ್ಣನ ಸಂದೇಶ ಸಾರಿದರು. `ಲೋಕವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುವುದಕ್ಕಾಗಿ ಶ್ರೀಕೃಷ್ಣ ಜನಿಸಿದ್ದು, ಎಲ್ಲಾ ಸಮಸ್ಯೆಗಳಿಗೂ ಕೃಷ್ಣನಲ್ಲಿ ಪರಿಹಾರವಿದೆ. ಒಬ್ಬ ಶಿಕ್ಷಕ, ಮಾರ್ಗದರ್ಶಕ, ಸ್ನೇಹಿತನಾಗಿ ಶ್ರೀಕೃಷ್ಣ ಪ್ರತಿಯೊಬ್ಬರಿಗೂ ಆಪ್ತನಾಗುತ್ತಾನೆ. ಗೀತಸಾರದ ಮೂಲಕ ಮನುಕುಲವನ್ನು ಧರ್ಮದ ಹಾದಿಯಲ್ಲಿ ನಡೆಸುವಲ್ಲಿ ಕೃಷ್ಣನ ಕೊಡುಗೆ ಅಪಾರ’ ಎಂದವರು ಹೇಳಿದರು.
`ಶ್ರೀಕೃಷ್ಣನ ಮಾರ್ಗದರ್ಶನದಂತೆ ನಾವೆಲ್ಲರೂ ಆದರ್ಶ ಬದುಕನ್ನು ಕಟ್ಟಿಕೊಳ್ಳೋಣ. ಉತ್ತಮ ನಾಗರಿಕರಾಗಿ ಬಾಳೋಣ’ ಎಂದು ಕರೆ ನೀಡಿದ ಅವರು ಎಲ್ಲಾ ಮಕ್ಕಳಿಗೂ ವಿಶೇಷ ಉಡುಗರೆಗಳನ್ನು ನೀಡಿದರು. ಶಾಲಾ ಪ್ರಾಥಮಿಕ ವಿಭಾಗದ ಕನ್ನಡ ಶಿಕ್ಷಕಿ ಚಂದ್ರಕಲಾ ಗೌಡ ಅವರು ದೇವಕಿ ನಂದನ ಶ್ರೀಕೃಷ್ಣನ ಹುಟ್ಟು ಬಾಲ್ಯ ಹಾಗೂ ಯೌವ್ವನದ ವಿವಿಧ ಯಶೋಗಾಥೆಗಳನ್ನು ಮಕ್ಕಳಿಗೆ ತಿಳಿಸಿದರು.
ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿಯರಾದ ಜೆರಿನ ಫರ್ನಾಂಡಿಸ್, ಶೀಲಾ ಫರ್ನಾಂಡಿಸ್ ಮತ್ತು ಮೋನಿಕಾ ವರ್ಣ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದು, ಇಡೀ ದಿನ ಇಲ್ಲಿನ ರಾಧಾ-ಕೃಷ್ಣರ ಜೊತೆ ಶಿಕ್ಷಕರು ಬೆರೆತರು.
