ಯಲ್ಲಾಪುರದಿಂದ ಹಳಿಯಾಳಕ್ಕೆ ಹೋಗುತ್ತಿದ್ದ ಬಸ್ಸು ಮಹಿಳೆಗೆ ಗುದ್ದಿದ್ದು, ಅಪಘಾತದ ರಭಸಕ್ಕೆ 35 ವರ್ಷದ ಮಹಿಳೆ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಬಸ್ಸು ಓಡಿಸುತ್ತಿದ್ದ ಮಂಜುನಾಥ ಮರಾಠಿ ವಿರುದ್ಧ ಹಳಿಯಾಳ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಹುನಗುಂದದ ಮಂಜುನಾಥ ಮರಾಠಿ ಅವರು ಯಲ್ಲಾಪುರದ ರವೀಂದ್ರ ನಗರದಲ್ಲಿ ವಾಸವಾಗಿದ್ದು, ಯಲ್ಲಾಪುರ ಡಿಪೋ ಬಸ್ಸಿನ ಚಾಲಕರಾಗಿದ್ದಾರೆ. ಅಗಸ್ಟ 16ರ ಮಧ್ಯಾಹ್ನ ಅವರು ಯಲ್ಲಾಪುರದಿಂದ ಹಳಿಯಾಳ ಮಾರ್ಗದ ಬಸ್ಸು ಓಡಿಸುತ್ತಿದ್ದರು. ಕುರಿಗದ್ದಾ ಬದಿಯಿಂದ ಸಾಂಬ್ರಾಣಿಯ ಬದಿಗೆ ನಡೆದುಹೋಗುತ್ತಿದ್ದ ಸಾಂಬ್ರಾಣಿಯ ರೂಪಾ ಮೊರೆ ಅವರಿಗೆ ಮಂಜುನಾಥ ಮರಾಠಿ ಅವರು ಎದುರಿನಿಂದ ಬಸ್ಸು ಗುದ್ದಿದರು.
ಪರಿಣಾಮ ರೂಪಾ ಮೊರೆ ಅವರು ಅಲ್ಲಿಯೇ ಕುಸಿದು ಬಿದ್ದಿದ್ದು, ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿತ್ತು. ಮೈ-ಕೈಗಳೆಲ್ಲವೂ ರಕ್ತದಿಂದ ಕೂಡಿದ್ದವು. ಆಸ್ಪತ್ರೆಗೆ ಸಾಗಿಸುವುದರೊಳಗೆ ರೂಪಾ ಮೊರೆ ಅವರು ಸಾವನಪ್ಪಿದರು. ಕರ್ಲಕಟ್ಟಾ ಬಳಿ ಈ ಅಪಘಾತ ನಡೆದಿದ್ದು, ವಿಷಯ ತಿಳಿದು ಹಳಿಯಾಳ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ತಂಗಿ ಸಾವಿನ ಬಗ್ಗೆ ಅರಿತು ಸ್ಥಳಕ್ಕೆ ಬಂದ ಕುರಿಗದ್ದಾದ ಶಿವಾಜಿ ಪಾಟೀಲ ಅವರು ಕಣ್ಣೀರಾದರು. ಕೊನೆಗೆ ಬಸ್ಸು ಚಾಲಕನ ವಿರುದ್ಧ ಶಿವಾಜಿ ಪಾಟೀಲ್ ಅವರು ಪೊಲೀಸ್ ದೂರು ನೀಡಿದರು.
Discussion about this post