ಶಿರಸಿಯಿಂದ ಕಾಣೆಯಾಗಿದ್ದ ಮಕ್ಕಳಿಬ್ಬರು ಸುರಕ್ಷಿತವಾಗಿದ್ದಾರೆ. ಊರೂರು ಸುತ್ತಿದ್ದ ಅವರಿಬ್ಬರು ಮುಂಬೈ ಮಹಾನಗರಿ ಪ್ರವೇಶಿಸಿದ್ದು, ಅವರ ಮುಂದಿನ ಸಂಚಾರಕ್ಕೆ ಸದ್ಯ ತಡೆ ಒಡ್ಡಲಾಗಿದೆ.
ಶಿರಸಿ ಕಸ್ತೂರಿಬಾ ನಗರದ 6 ಮತ್ತು 8ನೇ ತರಗತಿ ವಿದ್ಯಾರ್ಥಿಗಳು ಅಗಸ್ಟ 16ರಂದು ಕಾಣೆಯಾಗಿದ್ದರು. ಮಧ್ಯಾಹ್ನ ಚಿತ್ರಕಲಾ ತರಗತಿಗೆ ಹೋಗುವುದಾಗಿ ಹೇಳಿ ಬಾಲಕಿಯರಿಬ್ಬರು ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಸಿಸಿ ಕ್ಯಾಮರಾ ಪರಿಶೀಲನೆಯಲ್ಲಿ ಅವರು ಬಸ್ ಹತ್ತಿ ಬೇರೆ ಊರಿಗೆ ಹೋಗಿರುವುದು ಗೊತ್ತಾಗಿತ್ತು.
ಮಕ್ಕಳಿಬ್ಬರು ಕಾಣೆಯಾದ ಸುದ್ದಿ ಎಲ್ಲಡೆ ಹಬ್ಬಿದ್ದು ಜನ ಆತಂಕಕ್ಕೆ ಒಳಗಾಗಿದ್ದರು. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಕುಟುಂಬದವರು ಸಹ ಆತಂಕಕ್ಕೆ ಒಳಗಾಗಿದ್ದರು. ಅಗಸ್ಟ 17ರ ಸಂಜೆಯವರೆಗೂ ಅವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಇದೀಗ ಆ ಮಕ್ಕಳಿಬ್ಬರು ಸುರಕ್ಷಿತವಾಗಿರುವ ಬಗ್ಗೆ ಗೊತ್ತಾಗಿದೆ.
ಸದ್ಯ ಮಕ್ಕಳನ್ನು ಶಿರಸಿಗೆ ಕರೆತರುವ ಕೆಲಸ ನಡೆದಿದೆ. ಇದರಿಂದ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
