ಸರ್ಕಾರಿ ಕೆಲಸವನ್ನು ಬೇಗ ಮಾಡಿಸಿಕೊಳ್ಳುವುದಕ್ಕಾಗಿ ಭಟ್ಕಳದ ಸುನಿಲ ದೇವಾಡಿಗ ಹಾಗೂ ಸಲೀಮ್ ಖಾದರ್ ಅವರು ಮಹಾಬಲೇಶ್ವರ ಹೆಗಡೆ ಅವರಿಗೆ ಹಣಕೊಟ್ಟಿದ್ದಾರೆ. ಆದರೆ, ಅವರು ಹೇಳಿದ ಕೆಲಸ ಆಗದ ಕಾರಣ ಆ ಇಬ್ಬರು ಸೇರಿ ಮಹಾಬಲೇಶ್ವರ ಹೆಗಡೆ ಅವರನ್ನು ಬೆದರಿಸುತ್ತಿದ್ದಾರೆ!
`ಸರ್ಕಾರಿ ಕೆಲಸ ಮಾಡಿಸಿಕೊಳ್ಳಲು ಮಧ್ಯವರ್ತಿಗಳ ಮೊರೆ ಹೋಗಬೇಡಿ’ ಎಂದು ಸರ್ಕಾರವೇ ಹೇಳಿದರೂ ಜನ ಅದನ್ನು ಪಾಲಿಸುತ್ತಿಲ್ಲ. ಸರ್ಕಾರಿ ಕೆಲಸ ಮಾಡಿಕೊಡುವುದಾಗಿ ಹಣಪಡೆದು ಮೋಸ ಮಾಡುವವರ ಸಂಖ್ಯೆಯೂ ಕಡಿಮೆ ಇಲ್ಲ. ಆದರೆ, ಮಹಾಬಲೇಶ್ವರ ಹೆಗಡೆ ಅವರು ಹಾಗೆ ಮಾಡಿಲ್ಲ. ಕೆಲಸ ಮಾಡಿಕೊಡಲು ಆಗದ ಕಾರಣ ಅವರುಪಡೆದಿದ್ದ ಹಣವನ್ನು ಮರಳಿಸಿದ್ದು, ಅದಾಗಿಯೂ ಸುನಿಲ ದೇವಾಡಿಗ ಹಾಗೂ ಸಲೀಮ್ ಖಾದರ್ ಬೆದರಿಕೆ ಒಡ್ಡುವುದನ್ನು ಬಿಡಲಿಲ್ಲ!
ಭಟ್ಕಳದ ಬಂದರ್ ರಸ್ತೆ ೬ನೇ ಕ್ರಾಸಿನ ಸಲೀಮ್ ಖಾದರ್ ಹಾಗೂ ಶಿರಾಲಿ ತಟ್ಟಿಹಕ್ಲದ ಸುನಿಲ ದೇವಾಡಿಗ ಅವರಿಗೆ ಹಂಗಾಮಿ ಲಾಗಣಿ ಭೂಮಿಯ ದಾಖಲೆಗಳನ್ನು ಸರಿಪಡಿಸಬೇಕಿತ್ತು. ಇದಕ್ಕಾಗಿ ಅವರು ಕಾಯ್ಕಿಣಿ ಶಿರಾಣಿಕೇರಿಯ ಮಹಾಬಲೇಶ್ವರ ಹೆಗಡೆ ಅವರನ್ನು ಭೇಟಿ ಮಾಡಿದ್ದರು. ಮಾತುಕಥೆ ಪ್ರಕಾರ 2025ರ ಫೆ 25ರಂದು ಮಹಾಬಲೇಶ್ವರ ಹೆಗಡೆ ಅವರು ಹಣಪಡೆದಿದ್ದರು. ಆದರೆ, ಆ ಕೆಲಸವನ್ನು ಮಾಡಿಕೊಡಲು ಅವರಿಂದ ಸಾಧ್ಯವಾಗಿರಲಿಲ್ಲ.
ತಹಶೀಲ್ದಾರ್ ಕಚೇರಿಗೆ ಹೋಗಿ ವಿಚಾರಿಸಿದಾಗ ಕಾಗದಪತ್ರಪಡಿಸಿಲು ಇನ್ನೂ 2 ವರ್ಷ ಬೇಕಾಗಿರುವ ಬಗ್ಗೆ ಮಹಾಬಲೇಶ್ವರ ಹೆಗಡೆ ಅವರಿಗೆ ಮಾಹಿತಿ ಸಿಕ್ಕಿತು. ಹೀಗಾಗಿ `ಈ ಕೆಲಸ ನನ್ನಿಂದ ಅಸಾಧ್ಯ’ ಎಂದ ಅವರು ಸಲೀಮ್ ಖಾದರ್ ಹಾಗೂ ಸುನಿಲ ದೇವಾಡಿಗ ಅವರಿಂದಪಡೆದಿದ್ದ ಹಣವನ್ನು ಹಿಂತಿರುಗಿಸಿದರು. ಆದರೆ, ಇದಕ್ಕೆ ಸಲೀಮ್ ಖಾದರ್ ಹಾಗೂ ಸುನಿಲ ದೇವಾಡಿಗ ತೃಪ್ತರಾಗಲಿಲ್ಲ.
ಹೇಳಿದ ಕೆಲಸ ಮಾಡಿಕೊಡದ ಕಾರಣ ಮಹಾಬಲೇಶ್ವರ ಹೆಗಡೆ ಅವರನ್ನು ಬೈಯಲು ಶುರು ಮಾಡಿದರು. ಇನ್ನಷ್ಟು ಹಣ ಕೊಡುವಂತೆ ಪೀಡಿಸಿದರು. `ಹಣಕೊಡದೇ ಇದ್ದರೆ ನಿನ್ನನ್ನು ಕೊಚ್ಚಿ ಕಾಗೆಗೆ ಹಾಕುತ್ತೇವೆ’ ಎಂದು ಬೆದರಿಸಿದರು. ಇದರಿಂದ ನೊಂದ ಹೆಗಡೆ ಅವರು ಮುರುಡೇಶ್ವರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ನ್ಯಾಯಾಲಯಕ್ಕೆ ಹೋಗಿ ಅಲ್ಲಿನ ಸೂಚನೆ ಮೇರೆಗೆ ಪೊಲೀಸ್ ಪ್ರಕರಣವನ್ನು ದಾಖಲಿಸಿದರು.
Discussion about this post