ಉತ್ತರ ಕನ್ನಡ ಜಿಲ್ಲೆಯ ಜನರ ಮೇಲೆ ಪದೇ ಪದೇ ಕರಡಿ ದಾಳಿ ನಡೆಯುತ್ತಿದೆ. ಜೊಯಿಡಾದ ಕಾಳಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಸೋಮವಾರ ಮಾನವನ ಮೇಲೆ ಕರಡಿ ದಾಳಿ ನಡೆದಿದೆ.
ಕುಂಬಾರವಾಡಾ ವನ್ಯಜೀವಿ ವಲಯದ ಡೇರಿಯಾ ಗ್ರಾಮದ ಖುಂಬಯೆಯಲ್ಲಿ ರೈತರೊಬ್ಬರ ಮೇಲೆ ಕರಡಿ ಆಕ್ರಮಣ ಮಾಡಿದೆ. ಶಾಂತಾ ಹನುಮಂತ ಡೇರೆಕರ ಕರಡಿ ದಾಳಿಗೆ ಒಳಗಾಗಿ ಗಾಯಗೊಂಡಿದ್ದಾರೆ. ಕರಡಿ ಜೊತೆ ಅವರು ಸೆಣಸಾಟ ನಡೆಸಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ತಮ್ಮ ಜಮೀನಿನಲ್ಲಿ ಹೊಲ ಮೇಯಿಸುತ್ತಿದ್ದ ಡೇರೆಕರ್ ಅವರ ಮೇಲೆ ಕರಡಿ ಏಕಾಏಕಿ ದಾಳಿ ನಡೆಸಿದೆ. ಡೇರೆಕರ್ ಅವರ ಮುಖ, ತಲೆ ಬೆನ್ನು ಸೇರಿ ಅನೇಕ ಕಡೆ ಕರಡಿ ಪರಚಿದೆ. ಕುಂಬಾರವಾಡಾ ಮತ್ತು ಜೊಯಿಡಾ ತಾಲೂಕು ಆಸ್ಪತ್ರೆಯಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
Discussion about this post