ಹಸು ಹಾಗೂ ಹೋರಿಗಳ ಜೊತೆ ಕರುಗಳನ್ನು ಕೊಲ್ಲಲು ಕರೆದೊಯ್ಯುತ್ತಿರುವ ದಂಪತಿಯನ್ನು ಶಿರಸಿ ಪೊಲೀಸರು ತಡೆದಿದ್ದಾರೆ. ಈ ದಂಪತಿ ಜೊತೆ ಮತ್ತೊಬ್ಬರು ಸಿಕ್ಕಿಬಿದ್ದಿದ್ದು, ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರ ವಿರುದ್ಧ ಕಾನೂನು ಕ್ರಮವಾಗಿದೆ.
ಹಾವೇರಿ ಹಾನಗಲ್ಲಿನ ಬಸವರಾಜ ಗೊಲ್ಲರ್ ಹಾಗೂ ಅವರ ಪತ್ನಿ ಸುಜಾತಾ ಗೊಲ್ಲರ್ ಸೇರಿ ಶಿರಸಿ ಕಾನಗೋಡಿನ ಪಾಂಡುರoಗ ನಾಯ್ಕ ಅವರ ನೆರವುಪಡೆದು ಜಾನುವಾರು ಸಾಗಾಟ ಮಾಡುತ್ತಿದ್ದರು. ಎರಡು ಆಕಳು, ಒಂದು ಹೋರಿ ಜೊತೆ ಎರಡು ಕರುಗಳನ್ನು ಅವರು ಅಕ್ರಮವಾಗಿ ಹಾವೇರಿಗೆ ಸಾಗಿಸುತ್ತಿದ್ದರು. ಶಿರಸಿಯ ನೀಲೆಕೇಣಿ ಕ್ರಾಸಿನ ಬಳಿ ಪಿಎಸ್‌ಐ ನಾಗಪ್ಪ ಬಿ ಅವರು ಅದನ್ನು ತಡೆದರು.
ಅಗಸ್ಟ 17ರಂದು ಬುಲೆರೋ ಮಾಕ್ಸ ವಾಹನದ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ಹೀಗಾಗಿ ಆ ವಾಹನವನ್ನು ಪೊಲೀಸರು ನಿಲ್ಲಿಸಿದರು. ತಪಾಸಣೆ ನಡೆಸಿದಾಗ ಅದರಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳ ಸಾಗಾಟ ನಡೆದಿತ್ತು. ಹೊನ್ನಾವರದ ಹಡಿನಬಾಳದಿಂದ ಈ ಎಲ್ಲಾ ಜಾನುವಾರುಗಳನ್ನು ಖರೀದಿಸಿ ತಂದಿರುವುದಾಗಿ ಆ ದಂಪತಿ ಹೇಳಿದರು. ಆದರೆ, ಮಾರಾಟಗಾರರ ಹೆಸರು – ವಿಳಾಸ ತಿಳಿಸಲಿಲ್ಲ. ಖರೀದಿ ವ್ಯವಹಾರಕ್ಕೆ ಸಾಕ್ಷಿಯನ್ನು ಒದಗಿಸಲಿಲ್ಲ. ಪಶು ಅಧಿಕಾರಿಗಳ ಪ್ರಮಾಣ ಪತ್ರವೂ ಜೊತೆಗಿರಲಿಲ್ಲ.
ಬುಲೆರೋ ಮಾಕ್ಸ ವಾಹನದೊಳಗೆ ಅತ್ಯಂತ ಇಕ್ಕಟ್ಟಾದ ಜಾಗದಲ್ಲಿ ಆ ಜಾನುವಾರುಗಳಿದ್ದವು. ಅವುಗಳಿಗೆ ಅಲ್ಲಿ ಮಲಗಲು ಸಾಧ್ಯವಾಗುತ್ತಿರಲಿಲ್ಲ. ಸಾಗಾಟಗಾರರು ಹುಲ್ಲು-ನೀರು ಸಹ ಕೊಟ್ಟಿರಲಿಲ್ಲ. ಹೀಗಾಗಿ ಅವುಗಳನ್ನು ಕೊಲ್ಲುವುದಕ್ಕಾಗಿಯೇ ಕರೆದೊಯ್ಯುತ್ತಿರುವುದು ಪೊಲೀಸರಿಗೆ ಖಚಿತವಾಯಿತು. ಹಾನಗಲ್ ಕಡೆ ಹೋಗುತ್ತಿದ್ದ ವಾಹನ ತಡೆದ ಪೊಲೀಸರು ಅಕ್ರಮ ಸಾಗಾಟದ ಆ ಎಲ್ಲಾ ಜಾನುವಾರುಗಳನ್ನು ಕಾಪಾಡಿದರು.
Discussion about this post