ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಪ್ರಕಾರ ಗ್ರಾಮ ಅರಣ್ಯ ಹಕ್ಕು ಸಮಿತಿಗೆ ಸಲ್ಲಿಕೆಯಾದ ಅತಿಕ್ರಮಣದಾರರ ಅರ್ಜಿಗಳ ಪುನರ್ ಪರಿಶೀಲನೆ ನಡೆಯುತ್ತಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಏಳುವರೆ ತಿಂಗಳಿನಲ್ಲಿ ನಡೆದ ಪುನರ್ ಪರಿಶೀಲನಾ ಪ್ರಕ್ರಿಯೆಯಲ್ಲಿ ಒಟ್ಟು 7184 ಅರಣ್ಯವಾಸಿಗಳ ಅರ್ಜಿ ತಿರಸ್ಕೃತವಾಗಿದೆ!
ಉತ್ತರಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಬುಡಕಟ್ಟು ಜನಾಂಗ 4335 ಹಾಗೂ 80730 ಪಾರಂಪರಿಕ ಅರಣ್ಯವಾಸಿಗಳು ಮಂಜೂರಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆ ಪೈಕಿ ಬುಡಕಟ್ಟು ಜನಾಂಗಕ್ಕೆ 1356 ಹಾಗೂ ಪಾರಂಪರಿಕ ಅರಣ್ಯವಾಸಿಗಳಿಗೆ 385 ಸಾಗುವಳಿ ಹಕ್ಕು ನೀಡಲಾಗಿದೆ. ಈ ಹಂತದಲ್ಲಿ ಜಿಲ್ಲಾದ್ಯಂತ 11718 ಅರಣ್ಯವಾಸಿಗಳ ಅರ್ಜಿಗಳನ್ನು ತಿರಸ್ಕರಿಸಲ್ಪಟ್ಟ ಹಕ್ಕು ಸಮಿತಿಗಳಿಂದಲೇ ಪುನರ್ ಪರಿಶೀಲನಾ ಕಾರ್ಯ ಜರುಗಿಸಬೇಕು ಎಂದು ಸುಪ್ರೀಂ ಕೋರ್ಟ ನಿರ್ದೇಶಿಸಿದ್ದು, ಪರಿಶೀಲನಾ ಕಾರ್ಯ ನಡೆಯುತ್ತಿದೆ.
ಸದ್ಯ 11718 ಅರ್ಜಿಗಳಲ್ಲಿ 7184 ಅರ್ಜಿಗಳನ್ನು ತಿರಸ್ಕರಿಸಲ್ಪಟ್ಟ ಪಟ್ಟಿಗೆ ಸೇರಿದೆ. 2025ರ ಜನವರಿಯಿಂದ ಈವರೆಗಿನ ಅಂಕಿ-ಅoಶಗಳ ಮಾಹಿತಿ ಪ್ರಕಾರ ಶಿರಸಿ ಭಾಗದ ಅರ್ಜಿಗಳು ಹೆಚ್ಚಿನ ಪ್ರಮಾಣದಲ್ಲಿ ತಿರಸ್ಕೃತ ಪಟ್ಟಿಯಲ್ಲಿದೆ. ಶಿರಸಿ ತಾಲೂಕಿನಲ್ಲಿ 2961 ಅರ್ಜಿಗಳು ತಿರಸ್ಕೃತವಾಗಿದ್ದು, ಭಟ್ಕಳ 1801, ಕುಮಟಾ 966, ಯಲ್ಲಾಪುರ 905, ಹಳಿಯಾಳ 181, ಅಂಕೋಲ 171, ಸಿದ್ದಾಪುರ 70, ಹೊನ್ನಾವರ 38, ಕಾರವಾರ 7, ಜೊಯಿಡಾ 7 ಅರ್ಜಿಗಳು ತಿರಸ್ಕೃತ ಯಾದಿಯಲ್ಲಿವೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಈ ಬಗ್ಗೆ ಸೋಮವಾರ ಶಿರಸಿಯಲ್ಲಿ ಸಭೆ ನಡೆಸಿದ್ದು, `ಸುಪ್ರೀಂ ಕೊರ್ಟನ ನಿರ್ದೇಶನ ಮತ್ತು ಮಾರ್ಗದರ್ಶನ ಪಾಲನೆ ಆಗಿಲ್ಲ. ಗ್ರಾಮ ಸಭೆಯ ಮಾನದಂಡ ಮತ್ತು ನಿಯಮವಳಿ ತಿರಸ್ಕರಿಸಿರುವುದು, ಗ್ರಾಮ ಸಭೆಯಲ್ಲಿ ತೀರ್ಮಾನಿಸದಿರುವುದು ಹಾಗೂ ಸಭೆಯಲ್ಲಿ ಹಾಜರಿಯ ಸಂಖ್ಯೆಯನ್ನು ಲೆಕ್ಕಿಸದೇ ಮತ್ತು ನಿರ್ದಿಷ್ಟ ದಾಖಲೆಗಳಿಗೆ ಒತ್ತಾಯಿಸಿರುವುದು ಅರ್ಜಿ ತಿರಸ್ಕಾರಕ್ಕೆ ಮುಖ್ಯ ಕಾರಣ’ ಎಂದು ವಿವರಿಸಿದ್ದಾರೆ.
ಈ ಸಭೆಯಲ್ಲಿದ್ದ ಸಂಘಟನೆ ಜಿಲ್ಲಾ ಸಂಚಾಲಕರಾದ ಇಬ್ರಾಹೀಂ ಗೌಡಳ್ಳಿ, ಬಿಳೂರು ಸಂಚಾಲಕರಾದ ನೆಹರು ನಾಯ್ಕ, ಎಮ್ ಆರ್ ನಾಯ್ಕ, ರಾಜೀವ ಗೌಡ ಕತಗಾಲ್, ಕೆರಿಯಾ ಬೊಮ್ಮ ಗೌಡ, ಯಶೋಧಾ ಬಿ ನೌಟೂರು, ರಾಮ ತುಕಾರಾಮ ಗಾವಡೆ, ಬಸ್ತಾöವ ಅಂತೋನ್ ಡೀಸೋಜಾ ಮೊದಲಾದವರು ಮುಂದಿನ ಹೋರಾಟಕ್ಕೆ ನಿರ್ಧರಿಸಿದರು.
