ಕಾರವಾರ ಕ್ಷೇತ್ರ ಶಾಸಕ ಸತೀಶ್ ಸೈಲ್ ಮನೆ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿ ರಾಜಕೀಯ ತಿರುವುಪಡೆದಿದೆ. ರಾಜಕೀಯ ಕಾರಣದಿಂದ ಈ ದಾಳಿ ನಡೆಸಿರುವುದಾಗಿ ಸಚಿವ ಮಂಕಾಳು ವೈದ್ಯ ಹೇಳಿಕೆ ಬೆನ್ನಲ್ಲೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಸಹ ಈ ಬಗ್ಗೆ ಮಾತನಾಡಿದ್ದಾರೆ. ರೂಪಾಲಿ ನಾಯ್ಕ ಅವರು ಮಾತಿನ ಮದ್ಯೆ ಪರೋಕ್ಷವಾಗಿ ಮಾಧವ ನಾಯಕ ಅವರ ಹೆಸರನ್ನು ಎಳೆದುತಂದಿದ್ದು, ಇದಕ್ಕೆ ಮಾಧವ ನಾಯಕ ಸಹ ಎಲ್ಲಿಯೂ ರೂಪಾಲಿ ನಾಯ್ಕ ಅವರ ಹೆಸರು ಹೇಳದೇ ಕಿಡಿಕಾರಿದ್ದಾರೆ.
ರೂಪಾಲಿ ನಾಯ್ಕ ಅವರು ಶಾಸಕರಾಗಿದ್ದ ಅವಧಿಯಲ್ಲಿ ಮಾಧವ ನಾಯಕ ಅವರು ಭ್ರಷ್ಟಾಚಾರದ ಆರೋಪ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಇದೀಗ ರೂಪಾಲಿ ನಾಯ್ಕ ಅವರು `ಮಾಧವ ನಾಯಕ ಅವರು ಬಿಜೆಪಿ ಸರ್ಕಾರ ಇದ್ದಾಗ ಮಾತ್ರ ಪ್ರತಿಭಟನೆ ನಡೆಸುತ್ತಾರೆ’ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಾಧವ ನಾಯಕ ಅವರು `ನಾನು ಎಲ್ಲಿಯೂ ಬಿಜೆಪಿ ವಿರುದ್ಧ ಆರೋಪ ಮಾಡಿಲ್ಲ. ಕ್ಷೇತ್ರದಲ್ಲಿ ಕಮಿಷನ್ ಕೊಟ್ಟ ಹೊರತು ಗುದ್ದಲಿ ಪೂಜೆ ನಡೆಯುತ್ತಿಲ್ಲ. ಅದಕ್ಕೆ ಶಾಸಕಿ ಕಾರಣ’ ಎಂದು ಹೇಳಿದ್ದು, ಆ ಮಾತಿಗೆ ಈಗಲೂ ಬದ್ಧ’ ಎಂದಿದ್ದಾರೆ.
`ಕಾoಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಗುತ್ತಿಗೆದಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅದರ ವಿರುದ್ಧವೂ ನಾನು ಹೋರಾಟ ಮಾಡಿದ್ದೇನೆ. ನಾನು ಕೇವಲ ಬಿಜೆಪಿ ಸರ್ಕಾರ ಇದ್ದಾಗ ಮಾತ್ರ ಪ್ರತಿಭಟನೆ ನಡೆಸುತ್ತೇನೆ ಎಂಬ ಮಾತು ಮಾಜಿ ಶಾಸಕಿ ಬಾಯಿ ಚಪಲಕ್ಕೆ ಹೇಳಿದ ಹಾಗಿದೆ’ ಎಂದವರು ಪ್ರತಿಕ್ರಿಯಿಸಿದ್ದಾರೆ. `ಮಾಜಿ ಶಾಸಕರು ಅಧಿಕಾರದಲ್ಲಿದ್ದಾಗ ಕ್ಷೇತ್ರದ ಜನತೆ ಪರವಾಗಿ ಕೆಲಸ ಮಾಡುವುದು ಅವರ ಕರ್ತವ್ಯವಾಗಿತ್ತು. ಕಾರವಾರ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷನಾಗಿದ್ದ ನನಗೆ ಗುತ್ತಿಗೆದಾರರಿಗೆ ಉಂಟಾಗುತ್ತಿದ್ದ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಕರ್ತವ್ಯವಾಗಿತ್ತು. ಅಂಥ ಸನ್ನಿವೇಶದಲ್ಲಿ ನಾನು ನಡೆಸಿದ ಹೋರಾಟವನ್ನು ಕಾಮಾಲೆ ಕಣ್ಣಿನಿಂದ ನೋಡುವ ಬದಲು ಕಣ್ಣಿಗೆ ಚಿಕಿತ್ಸೆಪಡೆಯುವುದು ಒಳಿತು’ ಎಂದು ಮಾಧವ ನಾಯಕ ಹೇಳಿದ್ದಾರೆ.
`ಶಾಸಕ ಸತೀಶ್ ಸೈಲ್ ರಾಜಕೀಯಕ್ಕೆ ಬರುವ ಮೊದಲೇ ಉದ್ಯಮದಲ್ಲಿ ಬೆಳೆದವರು. ಕೋಟ್ಯಂತರ ರೂಪಾಯಿ ವಹಿವಾಟು ಮಾಡಿದವರು. ಅವರು ರಸ್ತೆ ಪಕ್ಕದಲ್ಲಿ ಪೆಟ್ಟಿಗೆ ಅಂಗಡಿ ಇಟ್ಟು ನಂತರ ರಾಜಕೀಯಕ್ಕೆ ಬಂದು ಶ್ರೀಮಂತರಾದವರಲ್ಲ. ಅವರ ಮನೆಯ ಮೇಲೆ ನಡೆದ ದಾಳಿಗೆ ನಾನು ಪ್ರತಿಕ್ರಿಯಿಸಬೇಕಾಗಿಲ್ಲ. ಮಾಜಿ ಶಾಸಕಿ ಮನೆ ಮತ್ತು ಬೇನಾಮಿ ಆಸ್ತಿಗಳ ಮೇಲೆ ದಾಳಿ ನಡೆದರೂ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದು ಮಾಧವ ನಾಯಕ ಹೇಳಿದ್ದಾರೆ.
