`ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಕೇಣಿಯಲ್ಲಿ ಬೃಹತ್ ಬಂದರು ನಿರ್ಮಾಣದಿಂದ ಅನೇಕ ಬದುಕು ನಾಶವಾಗಲಿದೆ’ ಎಂದು ಪರಿಸರ ತಜ್ಞರ ತಂಡ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ.
`ಕೇಣಿ ಬಂದರು ಯೋಜನೆಯ ಪರಿಸರ ಪರಿಣಾಮ ವರದಿ ಹಲವು ತಪ್ಪುಗಳಿಂದ ಕೂಡಿದೆ. ಹಲವೂ ಅಪೂರ್ಣ ಮಾಹಿತಿಗಳಿಂದ ಕೂಡಿದೆ. ಈ ಬಗ್ಗೆ ಸಮಗ್ರ ಅಧ್ಯಯನ ಆಗಿಲ್ಲ. ಕೇವಲ ಮೂರು ತಿಂಗಳಿನಲ್ಲಿ ಪರಿಸರ ಸಮೀಕ್ಷೆ ಅಸಾಧ್ಯ’ ಎಂದು ತಜ್ಞರು ಹೇಳಿದ್ದಾರೆ. `ಇಲ್ಲಿ ಹಲವು ಕಾಯ್ದೆಗಳ ಭಂಗ ಆಗುತ್ತಿದೆ. ಬಂದರು ಯೋಜನಾ ಜಾರಿ ಮಾಡುವ ಖಾಸಗಿ ಸಂಸ್ಥೆ ಹಾಗೂ ಮಂಡಳಿಯ ಪರವಾಗಿ ಪರಿಸರ ಪರಿಣಾಮ ವರದಿ ನೀಡಲಾಗಿದೆ. ನಿಷ್ಪಕ್ಷಪಾತ ವರದಿ ಅದಾಗಿಲ್ಲ’ ಎಂದು ತಜ್ಞರು ಆಕ್ಷೇಪವ್ಯಕ್ತಪಡಿಸಿದ್ದಾರೆ.
`ಕೇಣಿ ಬಂದರು ಯೋಜನೆಯಿಂದ ಅಪರೂಪದ ವಿನಾಶದ ಅಂಚಿನ ಜಲಚರ ಸಮುದ್ರ ಹಾಗೂ ಸಮುದ್ರದ ಅಂಚಿನ ಸಸ್ಯ ಸಮೂಹಗಳು ನಾಶವಾಗಲಿವೆ. ಈ ಬಗ್ಗೆ ಜೀವ ವೈವಿದ್ಯ ಮಂಡಳಿಯಿoದ ತಜ್ಞರ ವದರಿ ಅಭಿಪ್ರಾಯ ಪಡೆದಿಲ್ಲ. 2020ರಲ್ಲೆ ರಾಜ್ಯ ಜೀವ ವೈವಿದ್ಯ ಮಂಡಳಿ ಕೇಣಿ ಸಮುದ್ರ ಪ್ರದೇಶಕ್ಕೆ ಭೇಟಿ ನೀಡಿತು. ಬಹು ಅನನ್ಯ ಸಮುದ್ರದ ಅಂಚಿನ ನೈಸರ್ಗಿಕ ಜೀವ ವೈವಿಧ್ಯತಾಣ ಎಂದು ಕೇಣಿ ಸಮುದ್ರ ತೀರವನ್ನು ಗುರುತಿಸಿತ್ತು. ಇಲ್ಲಿರುವ ನಂದಿ ದೇವರ ಬೆಟ್ಟ ದೇವರ ಕಾಡು ಎನಿಸಿಕೊಂಡಿದೆ ಸಮುದ್ರದ ಒಳಗೆ ಚಾಚಿಕೊಂಡಿರುವ ಒಂದು ಕಿಮೀ ಉದ್ದದ ಸಮುದ್ರದ ಒಳಗೆ ಚಾಚಿ ಕೊಂಡಿರುವ ನಂದಿಬೆಟ್ಟವನ್ನು ಕೇಣಿ ಬಂದರು ಯೋಜನೆ ನೆಲಸಮ ಮಾಡಲಿದೆ. ನಂದಿ ಬೆಟ್ಟ ಪವಿತ್ರ ಐತಿಹಾಸಿಕ ಸ್ಥಳವಾಗಿದ್ದು, ಇದಕ್ಕೆ ಅರಣ್ಯ ಇಲಾಖೆ ಒಪ್ಪಿಗೆ ಕೊಡಬಾರದು’ ಎಂದು ಈ ಸಮಿತಿ ಆಗ್ರಹಿಸಿದೆ. `ಅಂಕೋಲಾ, ಕೇಣಿ, ಗೋಕರ್ಣವರೆಗೆ ಬಹು ಸಮೃದ್ಧ ಮೀನು ಉತ್ಪಾದನಾ ಪ್ರದೇಶವಾಗಿದೆ. ಕೇಣಿ ಸುತ್ತಲಿನ ಹಳ್ಳಿಗಳ ಸುಮಾರು 10000 ಮೀನುಗಾರರ ಬದುಕು ಕೇಣಿ ಬಂದರು ಯೋಜನೆಯಿಂದ ಆತಂತ್ರವಾಗಲಿದೆ’ ಎಂದು ಪರಿಸರ ಅಧ್ಯಯನಕಾರರು ಹೇಳಿದ್ದಾರೆ. `ಈ ಪ್ರದೇಶದ ಮೀನುಗಾರರಿಗೆ ಸಂಪೂರ್ಣ ಜೀವನ ಭದ್ರತೆ ಒದಗಿಸದೇ ಕೇಣಿ ಬಂದರು ಯೋಜನೆ ಜಾರಿ ಮಾಡುವುದು ಅಕ್ಷಮ್ಯ ಅಪರಾಧ. ಯೋಜನಾ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸದೇ ಇರುವದು ನಾಗರಿಕರ ಬದುಕುವ ಹಕ್ಕಿಗೆ ಭಂಗ ತರುವದು ಕಾನುನುಬಾಹಿರ ಕ್ರಮ’ ಎಂದಿದ್ದಾರೆ.
`ಈಗಾಗಲೇ ಕಳೆದ 1 ವರ್ಷದಿಂದ ಅಂಕೋಲಾದ ಮೀನುಗಾರರು ಹಲವು ಬಾರಿ ಕೇಣಿ ಬಂದರು ಯೋಜನೆ ಕೈಬಿಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಾವಿರಾರು ಮಹಿಳಾ ಮೀನುಗಾರರು ಸಮುದ್ರಕ್ಕೆ ಇಳಿದು ಬಂದರು ಯೋಜನೆ ವಿರೋಧ ಪ್ರಕಟಿಸಿದ್ದಾರೆ. ಕೇಣಿ ಬಂದರು ಯೋಜನೆ ಯಶಸ್ಸು ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆ ಜಾರಿ ಮೇಲೆ ಅವಲಂಬಿತವಾಗಿದ್ದು, ಕಳೆದ ಹಲವು ವರ್ಷಗಳಿಂದಲೂ ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆ ನೆನೆಗುದಿಗೆ ಬಿದ್ದಿದೆ. ಹಾಗಿರುವಾಗ 6000 ಕೋಟಿ ರೂಗಳ ಕೇಣಿ ಬಂದರು ಯೋಜನೆ ಅರ್ಥಿಕವಾಗಿ ಭಾರೀ ಹಾನಿದಾಯಕ ಹಾಗೂ ಅವ್ಯವಹಾರಿಕ ಅತಾರ್ಕಿಕ ಯೋಜನೆ’ ಎಂದು ಅವರು ಹೇಳಿದ್ದಾರೆ. `ಕೇಣಿ ಬಂದರು ಯೋಜನೆಯಿಂದ ಮೀನುಗಾರರು ರೈತರು ಭೂಮಿಕಳೆದುಕೊಳ್ಳಲಿದ್ದಾರೆ. ಅಂಕೋಲಾ ಕಾರವಾರ ತಾಲೂಕಿನಲ್ಲಿ ನಿರಾಶ್ರಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇನ್ನಷ್ಟು ಬೃಹತ್ ಯೋಜನೆಗಳನ್ನು ಸರ್ಕಾರ ಹೇರಬಾರದು’ ಎಂದು ತಜ್ಞರ ಸಮಿತಿ ಮನವಿ ಮಾಡಿದೆ. `ಕೇಣಿ ಬಂದರು ಯೋಜನೆ ಜಾರಿ ಆದಲ್ಲಿ ಸಿಆರ್‌ಜಡ್ ಕಾಯಿದೆಯ ಸಂಪೂರ್ಣ ಉಲ್ಲಂಘನೆ ಆಗಲಿದೆ. ಕೇಣಿ ಬಂದರು ಯೋಜನೆ ಅತಿಯಾದ ಮಾಲಿನ್ಯ ಉಂಟು ಮಾಡಲಿದೆ. ಬೃಹತ್ ಯಂತ್ರಗಳ ಕಾಮಗಾರಿ, ರಾಸಾಯನಿಕಗಳು ಮಾಲಿನ್ಯಕಾರಕ ತೈಲಗಳ ಸೇರ್ಪಡೆ, ವಿನಾಶದ ಅಂಚಿನ ಸಸ್ಯವರ್ಗ ಜಲಚರನಾಶ ಎಲ್ಲ ಕಾರಣಾಗಳಿಂದ ಅತಿ ಮಾನವ ಹಸ್ತಕ್ಷೇಪ ಆಗಲಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
`ಜಿಲ್ಲಾ ಸಿ ಆರ್ ಜಡ್ ಸಮಿತಿ, ರಾಜ್ಯ ಸಿ ಆರ್ ಜಡ್ ಸಮಿತಿಯವರು 10ಕಿಮೀ ಉದ್ದ ಸಮುದ್ರ ಪ್ರದೇಶ ಹಾಗೂ ಸಮುದ್ರ ತೀರದಲ್ಲಿ ಕರಾವಳಿ ಪರಿಸರ ಕಾಯಿದೆ ಉಲ್ಲಂಘನೆ ಆಗುವುದನ್ನು ಸಮರ್ಥಿಸಿಕೊಳ್ಳುತ್ತಾರ?’ ಎಂದು ಪ್ರಶ್ನಿಸಲಾಗಿದೆ. `ಕೇಣಿ ಬಂದರು ಯೋಜನೆಯಿಂದ ಮಾಲಿನ್ಯ, ಉಪ್ಪು ನೀರು, ವಿಷಕಾರಿ ರಾಸಾಯನಿಕ, ತೈಲಗಳ ಸೇರುವಿಕೆಯಿಂದ ಕೇಣಿ ಸುತ್ತಲಿನ 100ಕ್ಕೂ ಹೆಚ್ಚು ಮಜಿರೆ ಹಳ್ಳಿಗಳಿಗೆ ಹಾಗೂ ರೈತರಿಗೆ ಬಾಧೆ ಆಗಲಿದೆ. ಕೃಷಿ, ತೋಟಗಾರಿಕೆಗೆ ಸಂಕಷ್ಟ ಬರಲಿದೆ. 15000 ರೈತರು ಬೆಳೆ ಬೆಳೆಯಲಾರದ ಸ್ಥಿತಿ ತಲುಪುತ್ತಾರೆ. 25000 ಎಕರೆ ಕೃಷಿ ಪ್ರದೇಶ ಬಂಜರಾಗಲಿದೆ’ ಎಂದು ತಜ್ಞರು ವಿವರಿಸಿದ್ದಾರೆ. `ಕೇಣಿ ಸುತ್ತ 5 ಹಳ್ಳ ಹೊಳೆಗಳು ಸಮುದ್ರ ಸೇರುತ್ತವೆ. ಇವುಗಳಿಗೆ ವಿಷ ರಾಸಾಯನಿಕ, ಉಪ್ಪುಮಯ ಮಾಲಿನ್ಯ ಕಾರಕ ಸಮುದ್ರ ನೀರು ಮೇಲ್ಭಾಗಕ್ಕೆ ಸೇರಿ ಕುಡಿಯಲು ಹಾಗೂ ಕೃಷಿ ಇತರ ಬಳಕೆಗೆ ಅಯೋಗ್ಯವಾಗುತ್ತವೆ. ಜಲ ಕಾಯಿದೆಗಳ ಉಲ್ಲಂಘನೆ ಕೇಣಿ ಬಂದರು ಯೋಜನೆಯಿಂದ ಆಗಲಿದೆ’ ಎಂದು ಇಲ್ಲಿ ವಿವರಿಸಲಾಗಿದೆ. `ಬೇಲೇಕೇರಿ ಬಂದರು ಪ್ರದೇಶದಲ್ಲಿ 10 ವರ್ಷಗಳ ಹಿಂದೇ ಆಗಿರುವ ಅಕ್ರಮ ಅದಿರು ದಾಸ್ತಾನು, ಅಪಘಾತಗಳು, ಮಾಲಿನ್ಯ, ಅಕ್ರಮ ವಾಣಿಜ್ಯ ಚಟುವಟಿಕೆಗಳು, ರಸ್ತೆಗಳ ಅಧ್ವಾನ, ಈ ಪ್ರದೇಶದ ಜನತೆ ರೋಗಪೀಡಿತರಾದ ಪರಿಸ್ಥಿತಿಯನ್ನು ಅಂಕೋಲಾ ಜನತೆ ಮರೆತಿಲ್ಲ. ಕೇಣಿ ಬಂದರು ಯೋಜನೆಯಿಂದ ಪುನಃ ಈ ಎಲ್ಲ ಮಾಲಿನ್ಯ, ಅನಾರೋಗ್ಯ ಹಳ್ಳಿಗಳ ನಾಶ ಪರಿಸ್ಥಿತಿಗೆ ಒಳಗಾಗಬೇಕೆ? ಎಂದು ಪ್ರಶ್ನಿಸಿದ್ದಾರೆ.
`ಕೈಗಾ ಅಣುಸ್ಥಾವರ ಯೋಜನೆ, ನೌಕಾನೆಲೆ ಯೋಜನೆ, ಬಿಣಗಾ ಕಾಸ್ಟಿಕ್ ಸೋಡಾಕಾರ್ಖಾನೆ, ಕದ್ರಾಜಲವಿದ್ಯತ್ ಯೋಜನೆ, ಹೆದ್ದಾರಿ ಯೋಜನೆ, ಕೊಂಕಣರೈಲು ಯೋಜನೆಗಳು, ನಿಯಂತ್ರಣ ಇಲ್ಲದ ಬೇಕಾಬಿಟ್ಟಿ ಪ್ರವಾಸೋದ್ಯಮ ಈ ಎಲ್ಲಾ ಕಾರಣಗಳಿಂದ ಜಿಲ್ಲೆಯ ಕರಾವಳಿ & ಮಲೆನಾಡು ಪರಿಸರ ಧರಣಾ ಸಾಮರ್ಥ್ಯ ಕಳೆದು ಕೋಂಡಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವರದಿ ನೀಡಿದೆ. ಇದರಿಂದಾಗಿ ಕೃಷಿ ತೋಟಗಾರಿಕೆ, ಮೀನುಗಾರಿಕೆ ಹೈನೋದ್ಯಮ ಸೇರಿ ಸಾಂಪ್ರದಾಯಿಕ ಬದುಕು ನಾಶವಾಗಿದೆ. ಭೂಕುಸಿತ ತಡೆಗೆ ಕರಾವಳಿಯಲ್ಲಿ ಇನ್ನುಷ್ಟು ವಾಣಿಜ್ಯ ಭಾರಿ ಕಾಮಗಾರಿಗಳನ್ನು ನಡೆಸಬಾರದು ಎಂದು ಭೂಕುಸಿತ ಅಧ್ಯಯನ ಸಮೀತಿ ಸರ್ಕಾರಕ್ಕೆ ವರದಿ ನೀಡಿದೆ’ ಎಂದು ತಜ್ಞರ ತಂಡ ಹೇಳಿದೆ.
`ಅಂಕೋಲಾ ತಾಲೂಕಿನ ಜಾನಪದ ವೈವಿಧ್ಯತೆ, ವಿನಾಶದ ಅಂಚಿನ ಔಷಧಿ ಸಸ್ಯಗಳು ಕರಿಈಕಾಡು ಮಾವು ಜನಪದ ವೈದ್ಯರು, ಮೀನುಗಾರರು ಕೃಷಿ, ತೋಟಗಾರಿಕೆ , ಹೈನುಗಾರಿಕೆ, ಸುಸ್ಥಿರ ಅಭಿವೃಧ್ದಿ ಯೋಜನೆಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಉಸ್ತವಾರಿ ಸಚಿವರು ಮೀನುಗಾರಿಕಾ ಸಚಿವರು ಪ್ರಕಟಿಸಬೇಕು’ ಎಂದು ಬಿ ಎಂ ಕುಮರಸ್ವಾಮಿ, ಬಾಲಚಂದ್ರ ಸಾಯಿಮನೆ, ವಾಮನ್ ಆಚಾರ್ಯ, ವೈ ಬಿರಾಮಕೃಷ್ಣ ಬೆಂಗಳೂರು, ಶ್ರೀಪಾದ ಬಿಚ್ಚುಗುತ್ತಿ, ಕ ವೆಂಕಟೇಶ್ ಸಾಗರ, ನಾರಾಯಣ ಗಡೀಕೈ, ಮಹಾಬಲೇಶ್ವರ, ಹನುಮಂತಗೌಡ ಬೆಳ್ಳಂಬರ, ರವೀಂದ್ರ ಶೆಟ್ಟಿ, ಮಾರುತಿ ಗೌಡ ಮುಂತಾದವರು ಆಗ್ರಹಿಸಿದ್ದಾರೆ. ಪಶ್ಚಿಮಘಟ್ಟ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷರೂ ಆಗಿರುವ ಅನಂತ ಹೆಗಡೆ ಅಶೀಸರ ಅವರ ಮುಂದಾಳತ್ವದಲ್ಲಿ ಜಿಲ್ಲಾ ಪರಿಸರ ಸಂರಕ್ಷಣ ಸಮಿತಿ ಸಮಗ್ರ ವರದಿ ನೀಡಿದೆ.
Discussion about this post