ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದ ಶಿವಗುರುಜಿ ಮನೆ ಬಳಿ ಭೂ ಕುಸಿತವಾಗಿದೆ. ಕುಸಿತ ಮುಂದುವರೆದಲ್ಲಿ ಆ ಭಾಗದ ರಸ್ತೆ ಮಣ್ಣಿನ ಅಡಿ ಬೀಳುವ ಸಾಧ್ಯತೆಯಿದೆ.
ಈ ಊರು ವಜ್ರಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುತ್ತದೆ. ಮಂಗಳವಾರ ತಾರಗಾರ- ಬೀಗಾರ ಮತ್ತು ಬಾಗಿನಕಟ್ಟಾ ಗ್ರಾಮವನ್ನು ಸಂಪರ್ಕಿಸುವ ರಸ್ತೆ ಕೆಳಭಾಗದಲ್ಲಿ ಭೂ ಕುಸಿತ ಉಂಟಾಗಿದೆ. ಸದ್ಯ ಅಲ್ಲಿನ ರಸ್ತೆಯೂ ಕುಸಿಯುವ ಆತಂಕವಿದೆ.
ಕಳೆದ 4 ವರ್ಷಗಳಿಂದಲೂ ಈ ಭಾಗದಲ್ಲಿ ಭೂಮಿ ಕುಸಿಯುತ್ತಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ದಿನ 6 ಅಡಿ ಉದ್ದಕ್ಕೆ ರಸ್ತೆ ಕೆಳಭಾಗದ ಮಣ್ಣು ಕುಸಿದಿದೆ. ರಸ್ತೆ ಮೇಲೆ ಅಳವಡಿಸಿದ್ದ ಕಾಂಕ್ರೆಟ್ ಮಾತ್ರ ಹಾಗೇ ಇದ್ದು, ಮಳೆ ಮುಂದುವರೆದರೆ ಅದು ಕುಸಿಯುವ ಅಪಾಯವಿದೆ.
ರಸ್ತೆ ಕುಸಿಯುವ ಸಾಧ್ಯತೆ ಹಿನ್ನಲೆ ಆ ಭಾಗದ ಸಂಚಾರ ಅಪಾಯಕಾರಿ. ಮಣ್ಣು ಕುಸಿದ ಸ್ಥಳದಲ್ಲಿ ಝರಿ ನೀರು ಹರಿಯುತ್ತಿದ್ದು, ಕಾಲುವೆ ಸೃಷ್ಠಿಯಾಗಿದೆ. ಕುಸಿತದ ಪರಿಣಾಮ ಬೀಗಾರ, ಬಾಗಿನಕಟ್ಟಾ ಗ್ರಾಮದ ಜನ ಆತಂಕದಲ್ಲಿದ್ದಾರೆ. ಭೂ ಕುಸಿತದ ಪರಿಣಾಮ ಈಗಾಗಲೇ ರಸ್ತೆಯನ್ನು ಎರಡು ಬಾರಿ ಬದಲಾಯಿಸಲಾಗಿದ್ದು ಈಗಿರುವ ರಸ್ತೆಯೂ ಕುಸಿದರೆ ಹೊಸ ರಸ್ತೆ ನಿರ್ಮಾಣ ಕಷ್ಟ ಎಂಬುದು ಅಲ್ಲಿನವರ ಮಾತು.
