ಮುರುಡೇಶ್ವರಕ್ಕೆ ಬರುವ ಪ್ರವಾಸಿಗರಿಗೆ ರೂಮು ಕೊಡಿಸುವ ವಿಷಯದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಎರಡು ಗುಂಪಿನ ಜನ ಪರಸ್ಪರ ಚಾಕು-ಮಚ್ಚಿನಿಂದ ತಿವಿದುಕೊಂಡಿದ್ದು, ಗಾಯಗೊಂಡವರೆಲ್ಲರೂ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.
ಈ ಹೊಡೆದಾಟದಲ್ಲಿ ರೂಂ ಬಾಯ್ ಕೆಲಸ ಮಾಡಿಕೊಂಡಿದ್ದ ತೆರ್ನಮಕ್ಕಿ ಸಬಾತ್ತಿಯ ರಾಜೇಶ ನಾಯ್ಕ ಅವರಿಗೆ ಪೆಟ್ಟಾಗಿದೆ. ಜೊತೆಗೆ ಅವರ ಎದುರಾಳಿ ತಂಡದಲ್ಲಿದ್ದ ಭಟ್ಕಳದ ಮಿಥುನ್ ನಾಯ್ಕ ಅವರಿಗೂ ಗಾಯವಾಗಿದೆ. ಮುರುಡೇಶ್ವರದ ಆರ್ ಎನ್ ಎಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ರಾಜೇಶ ನಾಯ್ಕ ಅವರು ನೀಡಿದ ಪೊಲೀಸ್ ದೂರಿನ ಪ್ರಕಾರ `ಮುರುಡೇಶ್ವರದ ವೆಂಕಟೇಶ ನಾಯ್ಕ, ಜಯಂತ ನಾಯ್ಕ, ಮಿಥುನ ನಾಯ್ಕ, ಅಭಿಷೇಕ ಮೊಗೇರ್ ಹಾಗೂ ಶೇಖರ ನಾಯ್ಕ ಸೇರಿ ಅವರ ಮೇಲೆ ದಾಳಿ ಮಾಡಿದ್ದಾರೆ. ವೆಂಕಟೇಶ ನಾಯ್ಕ ಹಾಗೂ ಜಯಂತ ನಾಯ್ಕಗೆ ಮೊದಲಿನಿಂದ ಸಿಟ್ಟು ಮಾಡಿಕೊಂಡಿದ್ದರು. ಅಗಸ್ಟ 19ರ ಸಂಜೆ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರಿಗೆ ರೂಂ ಕಾಣಿಸುತ್ತಿದ್ದಾಗ ಅದಕ್ಕೆ ಅಡ್ಡಿಪಡಿಸಿದ್ದರು. ಆ ದಿನ ರಾತ್ರಿ 12.30ಕ್ಕೆ ಮುರುಡೇಶ್ವರ ದೇವಸ್ಥಾನ ರಸ್ತೆಯ ಇಂದ್ರಪ್ರಸ್ತ ಹೊಟೇಲಿನ ಬಳಿಯಿರುವಾಗ ಐದು ಜನ ಆಗಮಿಸಿ ದಬಾಯಿಸಿದರು’ ಎಂದು ದೂರಿದ್ದಾರೆ.
`ನೀನು ಒಬ್ಬನೇ ಪ್ರವಾಸಿಗರಿಗೆ ರೂಂ ಕಾಣಿಸಿದರೆ ನಾವೇನು ಮಾಡುವುದು?’ ಅವರೆಲ್ಲರೂ ಪ್ರಶ್ನಿಸಿದ್ದು, `ನೀವು ಬೇಕಾದರೆ ರೂಂ ಕಾಣಿಸಿ’ ಎಂದು ರಾಜೇಶ ನಾಯ್ಕ ಹೇಳಿದ್ದಾರೆ. ಆಗ ವೆಂಕಟೇಶ ನಾಯ್ಕ ಅವರು ಮಚ್ಚಿನಿಂದ ತಲೆಗೆ ಹೊಡೆದಿದ್ದು, ಅದೇ ವೇಳೆ ಜಯಂತ ನಾಯ್ಕ ಅವರು ಕಟ್ಟಿಗೆಯಿಂದ ಹೊಡೆದು ಗಾಯಗೊಳಿಸಿದ್ದಾರೆ. ಈ ವೇಳೆ ಉಳಿದವರು ಥಳಿಸಿದ ಬಗ್ಗೆ ರಾಜೇಶ ನಾಯ್ಕ ಅವರು ಪೊಲೀಸ್ ದೂರಿನಲ್ಲಿ ವಿವರಿಸಿದ್ದಾರೆ. ಅಣ್ಣನ ಮಗ ಶಿವರಾಜ ಆಗಮಿಸಿ ಹೊಡೆದಾಟ ಬಿಡಿಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿಯೂ ರಾಜೇಶ ನಾಯ್ಕ ವಿವರಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಮುರುಡೇಶ್ವರ ಮಾವಳ್ಳಿಯಲ್ಲಿ ಶಿಲ್ಪಿ ಕೆಲಸ ಮಾಡುವ ಶೇಖರ ನಾಯ್ಕ ಸಹ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ನೀಡಿದ್ದಾರೆ. ಚಂದ್ರಹಿತ್ಲದ ರಾಜು ನಾಯ್ಕ, ಭಾಸ್ಕರ ನಾಯ್ಕ, ಕೇಶವ ನಾಯ್ಕ, ಸುಂದರ ನಾಯ್ಕ, ವಸಂತ ನಾಯ್ಕ ವಿರುದ್ಧ ಅವರು ಹೊಡೆದಾಟದ ಆರೋಪ ಮಾಡಿದ್ದಾರೆ. ಇದರೊಂದಿಗೆ ಹೆಬಳೆ ಗಾಂಧೀನಗರದ ಜಗದೀಶ ಮೊಗೇರ, ಮಾವಳ್ಳಿ ಕನ್ನಡಶಾಲೆಯ ಗಣೇಶ ನಾಯ್ಕ, ಬೈಲೂರಿನ ಗಣೇಶ ನಾಯ್ಕ, ಬೆಳ್ನಿಯ ವಿನೋದ ನಾಯ್ಕ, ತೆರ್ನಮಕ್ಕಿಯ ಶಿವರಾಜ ನಾಯ್ಕ, ಸೋನಾರಕೇರಿಯ ರೋಹಿತ ಮೊಗವೀರ, ಭಟ್ರಹಿತ್ಲದ ವಿಜಯ ಪಟಗಾರ, ಗರಡಿಗದ್ದೆಯ ಪ್ರಶಾಂತ ನಾಯ್ಕ ಎಲ್ಲರೂ ಸೇರಿ ತಮ್ಮ ಸ್ನೇಹಿತ ಮಿಥುನ್ ನಾಯ್ಕ ಅವರ ವಿರುದ್ಧ ಮುಗಿಬಿದ್ದಿರುವುದಾಗಿ ಹೇಳಿದ್ದಾರೆ. `ಜಗದೀಶ ಮೊಗವೀರ ಅವರು ಮಿಥುನ್ ನಾಯ್ಕ ಅವರಿಗೆ ಮಚ್ಚು ಬೀಸಿದ್ದು, ಆಗ ಅವರು ತಪ್ಪಿಸಿಕೊಂಡರು. ಈ ವೇಳೆ ರಾಘು ನಾಯ್ಕ ಅವರು ಮಿಥುನ್ ನಾಯ್ಕ ಅವರ ಬೆನ್ನು ಹಾಗೂ ಕೈಗೆ ಚಾಕು ಇರಿದರು’ ಎಂದು ಶೇಖರ ನಾಯ್ಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎರಡು ಕಡೆಯವರ ಪ್ರಕರಣ ದಾಖಲಿಸಿದ ಮುರುಡೇಶ್ವರ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
