ಗೋವಾದಿಂದ ಕರ್ನಾಟಕಕ್ಕೆ 4 ಸಾವಿರ ರೂ ಮೌಲ್ಯದ ಸರಾಯಿ ಸಾಗಿಸಿದ್ದ ಆಂದ್ರಪ್ರದೇಶದ ವ್ಯಕ್ತಿಯನ್ನು 14 ವರ್ಷದ ನಂತರ ಕಾರವಾರದ ಚಿತ್ತಾಕುಲ ಪಿಎಸ್ಐ ಮಹಾಂತೇಶ ವಾಲ್ಮೀಕಿ ಹಾಗೂ ನರಸಿಂಹಲು ಸೇರಿ ಬಂಧಿಸಿದ್ದಾರೆ.
ಆoಧ್ರ ಪ್ರದೇಶದ ಶಿವರಾಮಿ ರೆಡ್ಡಿ ಅವರು 2011ರ ಅಕ್ಟೋಬರ್ 19ರಂದು ತಮ್ಮ ಬೈಕಿನಲ್ಲಿ ಗೋವಾದಿಂದ ಸರಾಯಿ ಸಾಗಿಸುವಾಗ ಸಿಕ್ಕಿ ಬಿದ್ದಿದ್ದರು. ಮಾಜಾಳಿ ಘೊಟ್ನೆಭಾಗ ಕೊಮಾರಪಂತವಾಡ ಕ್ರಾಸಿನ ಬಳಿ ಸಿಕ್ಕಿಬಿದ್ದ ಅವರನ್ನು ಪೊಲೀಸರು ವಶಕ್ಕೆಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆ ವೇಳೆ ಜಾಮೀನುಪಡೆದು ಪರಾರಿಯಾಗಿದ್ದ ಶಿವರಾಮಿ ರೆಡ್ಡಿ ಮತ್ತೆ ಕಾರವಾರದ ಕಡೆ ತಲೆ ಹಾಕಿರಲಿಲ್ಲ.
14 ವರ್ಷಗಳಿಂದಲೂ ಶಿವರಾಮಿ ರೆಡ್ಡಿ ನ್ಯಾಯಾಲಯಕ್ಕೆ ಹಾಜರಾಗದೇ ಇರುವುದನ್ನು ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಗಮನಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ ಹಾಗೂ ಜಗದೀಶ ಎಂ ಅವರ ಜೊತೆ ಚರ್ಚಿಸಿ ಈ ಬಗ್ಗೆ ಡಿವೈಎಸ್ಪಿ ಗಿರೀಶ ಎಸ್ ವಿ ಅವರಿಂದ ವಿವರಪಡೆದರು. ಕದ್ರಾ ಸಿಪಿಐ ಪ್ರಕಾಶ ದೇವಾಡಿಗ ಅವರಿಗೆ ಸೂಚನೆ ನೀಡಿ ಚಿತ್ತಾಕುಲ ಪಿಎಸ್ಐಗಳಾದ ಮಹಾಂತೇಶ ಬ ವಾಲ್ಮೀಕಿ ಹಾಗೂ ನರಸಿಂಹಲು ಅವರ ನೇತೃತ್ವದಲ್ಲಿ ಶೋಧ ಶುರು ಮಾಡಿದರು.
ಚಿತ್ತಾಕುಲ ಪೊಲೀಸ್ ಠಾಣೆಯ ಎಎಸ್ಐ ದೀಪಕ ನಾಯ್ಕ, ಸಿಬ್ಬಂದಿ ಶ್ರೀಕಾಂತ ಡಿ ನಾಯ್ಕ, ಮುಕುಂದ ವಿ ನಾಯ್ಕ, ಪಿ ದೇವರಾಜ, ಗೌತಮ ರಾಜ್, ದಿವ್ಯಜ್ಯೋತಿ, ಸಾವಿತ್ರಿ ಸನದಿ ಅವರ ತಂಡ ಆರೋಪಿಯ ಜಾಡುಹಿಡಿದು ವಿಳಾಸ ಹುಡುಕಿತು. ಅಲ್ಲಿ ಇಲ್ಲಿ ಅಡಗಿ ಕುಳಿತಿದ್ದ ಶಿವರಾಮಿ ರೆಡ್ಡಿ ಅವರನ್ನು ಈ ತಂಡ ಬಂಧಿಸಿತು.
