ಶಿರಸಿ-ಸಿದ್ದಾಪುರ ಭಾಗದ ವಿದ್ಯುತ್ ಸಮಸ್ಯೆ ಬಗ್ಗೆ ಶಾಸಕ ಭೀಮಣ್ಣ ನಾಯ್ಕ ಅಧಿವೇಶನದಲ್ಲಿ ವಿಷಯ ಮಂಡಿಸಿದ್ದಾರೆ. ಜೊತೆಗೆ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ ಉತ್ಸವ ಹೋಗುವ ಮಾರ್ಗದಲ್ಲಿ ಭೂಗತ ವಿದ್ಯುತ್ ಮಾರ್ಗ ಅಳವಡಿಸುವಂತೆಯೂ ಆಗ್ರಹಿಸಿದ್ದಾರೆ. ಈ ಎರಡು ವಿಷಯಕ್ಕೆ ಇಂಧನ ಸಚಿವ ಕೆ ಜೆ ಜಾರ್ಜ ಸ್ಪಂದಿಸಿದ್ದಾರೆ.
`ಶಿರಸಿ-ಸಿದ್ದಾಪುರ ಭಾಗದ ದಟ್ಟ ಅರಣ್ಯದಲ್ಲಿ ಹಾದು ಹೋದ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಮುಖ್ಯರಸ್ತೆ ಅಂಚಿನಲ್ಲಿ ಸ್ಥಳಾಂತರಿಸಬೇಕು’ ಎಂದು ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಅಧಿವೇಶನದಲ್ಲಿ ಆಗ್ರಹಿಸಿದ್ದರು. ಅದರೊಂದಿಗೆ `ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯ ಉತ್ಸವ ತೆರಳುವ ಮಾರ್ಗದಲ್ಲಿ ಭೂಗತ ಕೇಬಲ್ ಮೂಲಕ ವಿದ್ಯುತ್ ಸಂಪರ್ಕ ಒದಗಿಸಬೇಕು’ ಎಂದು ಒತ್ತಾಯಿಸಿದ್ದರು.
`ಶಿರಸಿ ಕ್ಷೇತ್ರ ಮಲೆನಾಡು ಪ್ರದೇಶವಾಗಿದ್ದು, ದಟ್ಟ ಅರಣ್ಯದಿಂದ ಕೂಡಿದೆ. ಮಳೆ ಶುರವಾದರೆ ಹಳ್ಳಿ ಭಾಗದ ವಿದ್ಯುತ್ ಲೈನ್ ಮೇಲೆ ಮರ ಬೀಳುತ್ತದೆ. ಇದರಿಂದ ವಾರಗಳ ಕಾಲ ವಿದ್ಯುತ್ ಸಮಸ್ಯೆ ಎದುರಾಗುತ್ತದೆ. ಅರಣ್ಯ ಪ್ರದೇಶದ ಲೈನ್ ರಸ್ತೆ ಬದಿ ಸ್ಥಳಾಂತರ ಮಾಡಿದರೆ ಗ್ರಾಮೀಣ ಜನರಿಗೆ ನಿರಂತರ ಬೆಳಕು ನೀಡಲು ಸಹಕಾರಿಯಾಗುತ್ತದೆ’ ಎಂದು ಭೀಮಣ್ಣ ನಾಯ್ಕ ಅವರು ಸದನಲ್ಲಿ ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಂಧನ ಸಚಿವ ಕೆ ಜೆ ಜಾರ್ಜ `ಉತ್ತರ ಕನ್ನಡ ಜಿಲ್ಲೆ 174ಕಿಮೀ ಹೈಟೆನ್ಸನ್ ತಂತಿ ಹೋಗಿದೆ. 592ಕಿಮೀ ಎಲ್ ಟಿ ಲೈನ್ ಎಳೆಯಲಾಗಿದೆ. 7ಕಿಮೀ ತಂತಿಯ ಮೇಲೆ ಪದೇ ಪದೇ ಮರ ಬಿದ್ದು ತೊಂದರೆ ಆಗುತ್ತಿದ್ದು, ಅದನ್ನು ಸ್ಥಳಾಂತರಿಸಲಾಗಿದೆ. 58ಕಿಮೀ ದೂರದ ತಂತಿ ಸ್ಥಳಾಂತರಕ್ಕೆ ಗುರುತು ಮಾಡಲಾಗಿದೆ. ಅದರಲ್ಲಿ 9 ಕಿಮೀ ಸ್ಥಳಾಂತರ ಕ್ರಮ ಜರುಗಿಸಲಾಗುತ್ತದೆ’ ಎಂದು ಉತ್ತರಿಸಿದ್ದರು.
ಸದ್ಯ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆಯ ಉತ್ಸವ ಹೋಗುವ ಮಾರ್ಗದಲ್ಲಿ ಭೂಗತ ಮಾರ್ಗದ ಮೂಲಕ ವಿದ್ಯುತ್ ಸರಬರಾಜು ಮಾಡಲು ಸರ್ಕಾರ ಅಧಿಕಾರಿಗಳಿಗೆ ನಿರ್ದೇಶಿಸಿದೆ. 4.6ಕಿಮೀ ಎಚ್ ಟಿ ಓವರ್ ಹೆಡ್ ಮಾರ್ಗ ಮತ್ತು 15.90ಕಿಮೀ ಎಲ್ಟಿ ಓವರ್ ಹೆಡ್ ಮಾರ್ಗವನ್ನು ಭೂಮಿಯ ಒಳಭಾಗಕ್ಕೆ ಬದಲಾಯಿಸುವಂತೆ ಇಂಧನ ಸಚಿವ ಕೆ ಜೆ ಜಾರ್ಜ ಅವರು ಟಿಪ್ಪಣಿ ಹೊರಡಿಸಿದ್ದಾರೆ. 3 ಕೋಟಿ ರೂ ವೆಚ್ಚದಲ್ಲಿ ಕೂಡಲೇ ಈ ಕಾಮಗಾರಿ ಕೈಗೊಳ್ಳುವಂತೆ ಇಂಧನ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
Discussion about this post