ಗ್ರಾಮೀಣ ಪ್ರದೇಶದ ಜನರ ಸಂಕಷ್ಟಗಳಿಗೆ ಸ್ಪಂದಿಸುವುದರ ಜೊತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತವೂ `ಪಿಡಿಓ ಆಫ್ ಮಂತ್’ ಎಂಬ ಪ್ರಶಸ್ತಿ ನೀಡುತ್ತಿದೆ. ಆದರೆ, ಈಚೆಗೆ ಅಕ್ರಮ-ಅವ್ಯವಹಾರಗಳಲ್ಲಿ ಭಾಗಿಯಾಗಿ ದಂಡದ ಶಿಕ್ಷೆ ಹಾಗೂ ಎಚ್ಚರಿಕೆಗೆ ಗುರಿಯಾದ ಅಧಿಕಾರಿಗಳು ಸಹ ಈ ಪ್ರಶಸ್ತಿಗೆ ಭಾಜನರಾಗುತ್ತಿದ್ದಾರೆ!
ಈಶ್ವರ ಕಾಂದೂ ಅವರು ಉತ್ತರ ಕನ್ನಡ ಜಿ ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿದ್ದಾಗ ಈ ಪ್ರಶಸ್ತಿ ನೀಡುವ ಪದ್ಧತಿ ಜಾರಿಗೆ ತಂದರು. ಆರಂಭದ ಅವಧಿಯಲ್ಲಿ ಅತ್ಯುತ್ತಮ ಅಧಿಕಾರಿಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದ್ದು, ನಡುವೆ ಒಂದೆರಡು ಬಾರಿ ಕೆಲಸ ಮಾಡದೇ ಕಾಲಹರಣ ಮಾಡುವ ಪಿಡಿಓಗಳಿಗೂ ಪ್ರಶಸ್ತಿ ಸಿಕ್ಕಿತು. ಇದೀಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಅಕ್ರಮ-ಅವ್ಯವಹಾರಗಳಲ್ಲಿ ಭಾಗಿಯಾದ ಪಿಡಿಓಗಳಿಗೆ ಜಿಲ್ಲಾ ಪಂಚಾಯತ ಪ್ರಶಸ್ತಿ ನೀಡುತ್ತಿದೆ. ಪಿಡಿಓ ಮೇಲಿನ ಆರೋಪ ಸಾಭೀತಾದ ನಂತರವೂ ಅವರನ್ನು `ಉತ್ತಮ ಪಿಡಿಓ’ ಎಂದು ಪ್ರಶಸ್ತಿ ನೀಡಲಾಗಿದೆ!
ಪಿಡಿಓ ಆಫ್ ಮಂತ್ ಪ್ರಶಸ್ತಿ ಪ್ರಕ್ರಿಯೆಗಾಗಿ ಒಂದು ಸಮಿತಿ ರಚಿಸಲಾಗಿದೆ. ಪ್ರಶಸ್ತಿಪಡೆಯುವುದಕ್ಕೆ ಕೆಲವು ಮಾನದಂಡಗಳನ್ನು ಸಹ ಅಳವಡಿಸಲಾಗಿದೆ. ತಿಂಗಳಲ್ಲಿ ನಿಗದಿತ ಗುರಿ ಪೂರೈಸಿದ ಪಿಡಿಓಗಳಿಗೆ ಈ ಪ್ರಶಸ್ತಿ ಸಿಗಲಿದೆ. ಪ್ರತಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಪಿಡಿಓಗಳ ಪ್ರಶಸ್ತಿಗೆ ಶಿಫಾರಸ್ಸು ಮಾಡಲಿದ್ದು, ಆ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯತದಲ್ಲಿರುವ ವಿವಿಧ ಶಾಖಾ ಮುಖ್ಯಸ್ಥರನ್ನು ಒಳಗೊಂಡ ಸಮಿತಿ ಪರಿಶೀಲಿಸಿ ಪ್ರಶಸ್ತಿ ನೀಡುತ್ತದೆ. ಆ ಸಮಿತಿಗೆ ಜಿ ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೇ ಅಧ್ಯಕ್ಷರಾಗಿದ್ದು, ಅವರೇ ಪ್ರಶಸ್ತಿ ನೀಡಿ ಗೌರವಿಸುತ್ತಾರೆ.
ಊರಿನ ಸ್ವಚ್ಚತೆ ಕಾಪಾಡುವಿಕೆ, ನರೆಗಾದಲ್ಲಿನ ಸಾಧನೆ, ಕಾಮಗಾರಿಗೆ ಜಿಯೋ ಟ್ಯಾಗ್ ಅಳವಡಿಕೆ, ಸಕಾಲದಲ್ಲಿನ ಕೂಲಿ ಪಾವತಿ, ಕಾಮಗಾರಿ ಪೂರ್ಣಗೊಳಿಸುವಿಕೆ, ತೆರಿಗೆ ಸಂಗ್ರಹ, ಕಟ್ಟಡದ ಶುಚಿತ್ವ ಕಾಪಾಡುವಿಕೆ, ಮಹಿಳಾ ವಾಹನ ಚಾಲಕರಿಗೆ ತರಬೇತಿ, ಶೌಚಾಲಯ ನಿರ್ಮಾಣ, ಗೃಂಥಾಲಯ ಡಿಜಿಟಲೀಕರಣ, ಗ್ರಾ ಪಂ ಕಟ್ಟಡಕ್ಕೆ ಸೋಲಾರ್ ಅಳವಡಿಕೆ, ಸ್ವೀಕರಿಸಿದ ಅರ್ಜಿಗಳ ಸಕಾಲದಲ್ಲಿನ ವಿಲೇವಾರಿ, ಕಡಿಮೆ ವಿದ್ಯುತ್ ಬಳಕೆ ಸೇರಿ ಹಲವು ವಿಷಯದಲ್ಲಿ ಸಾಧನೆ ಮಾಡಿದ ಪಿಡಿಓಗಳಿಗೆ ಈ ಪ್ರಶಸ್ತಿ ಅಡಿ ಆಯ್ಕೆ ಮಾಡಲಾಗುತ್ತದೆ. ಸದ್ಯ ಕುಮಟಾದ ಹೊನಗದ್ದೆ ಗ್ರಾಮ ಪಂಚಾಯತದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗರಾಜ ನಾಯ್ಕ ಅವರು ನರೆಗಾ ಅವ್ಯವಹಾರ ಪ್ರಕರಣದಲ್ಲಿ ಸಿಲುಕಿದ್ದು, ತನಿಖೆ ನಡೆಸಿದ ಒಂಬುಡ್ಸಮೆನ್ ಅವರಿಗೆ ಎಚ್ಚರಿಕೆ ಜೊತೆ ಹಲವು ಬಾರಿ ದಂಡ ವಿಧಿಸಿದ್ದಾರೆ. ಸಾರ್ವಜನಿಕ ಅರ್ಜಿಗಳಿಗೆ ಸಹ ನಾಗರಾಜ ನಾಯ್ಕ ಅವರು ಒಂದು ವರ್ಷ ಕಳೆದರೂ ಹಿಂಬರಹ ನೀಡದ ದಾಖಲೆಗಳಿವೆ. ಮಹಿಳೆಯೊಬ್ಬರಿಗೆ ಶೌಚಾಲಯ ನಿರ್ಮಿಸಿಕೊಡದ ಪ್ರಕರಣ ಲೋಕಾಯುಕ್ತರ ಗಮನಕ್ಕೆ ಹೋಗಿದ್ದು, ಲೋಕಾಯುಕ್ತ ಅಧಿಕಾರಿಗಳಿಂದ ಬೈಸಿಕೊಂಡ ನಂತರ ಮಹಿಳೆಗೆ ಅವರು ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ.
ಈ ಎಲ್ಲಾ ದಾಖಲೆಗಳು ಜಿಲ್ಲಾ ಪಂಚಾಯತ ಕಡತದಲ್ಲಿ ಭದ್ರವಾಗಿದ್ದರೂ ಆ ಬಗ್ಗೆ ಗಮನಿಸದೇ ಪ್ರಶಸ್ತಿ ನೀಡಲಾಗಿದೆ.
ಸಾರ್ವಜನಿಕ ಸಮಸ್ಯೆ ಆಲಿಸಲು ಅಗತ್ಯವಿರುವ ಕಚೇರಿಯ ದೂರವಾಣಿ ಸರಿಪಡಿಸುವಂತೆ ಜನ ಆಗ್ರಹಿಸಿದರೂ ಪಿಡಿಓ ನಾಗರಾಜ ನಾಯ್ಕ ಅವರು ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪ್ರಕರಣವೊಂದಕ್ಕೆ ಸಂಬoಧಿಸಿ ಪಿಡಿಓ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದ್ದು, ಅದೆಲ್ಲದವರ ನಡುವೆ ಜಿಲ್ಲಾ ಪಂಚಾಯತ ಈ ಬಾರಿ ನಾಗರಾಜ ನಾಯ್ಕ ಅವರಿಗೆ `ಪಿಡಿಓ ಆಫ್ ಮಂತ್’ ಪ್ರಶಸ್ತಿ ನೀಡಿದೆ.
Discussion about this post