ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣ ವಿಷಯಕ್ಕೆ ಸಂಬoಧಿಸಿ ಮೀನುಗಾರರೆಲ್ಲರೂ ಒಂದಾಗಿರೋಣ. ಶುಕ್ರವಾರ ನಡೆಯುವ ಅಹವಾಲು ಸಭೆಯಲ್ಲಿ ಎಲ್ಲರೂ ಸೇರಿ ಯೋಜನೆಯನ್ನು ವಿರೋಧಿಸೋಣ’ ಎಂದು ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷ ದಿಲೀಪ್ ಅರ್ಗೇಕರ್ ಅವರು ಮನವಿ ಮಾಡಿದ್ದಾರೆ.
`ಕಡಲ ಮಕ್ಕಳಾದ ಮೀನುಗಾರರಿಗೆ ಮೀನುಗಾರಿಕೆಯೇ ಮುಖ್ಯ ಕಸುಬು. ನೌಕಾನೆಲೆ, ಬಂದರು ಯೋಜನೆಗಳಿಂದ ಮೀನುಗಾರರು ಕಡಲ ತೀರವನ್ನು ಕಳೆದುಕೊಂಡಿದ್ದು, ಕೇಣಿಯಲ್ಲಿ ಬೃಹತ್ ವಾಣಿಜ್ಯ ಬಂದರು ನಿರ್ಮಾಣ ವಾದರೆ ಸಾವಿರಾರು ಮೀನುಗಾರರು ಮತ್ತೆ ಅತಂತ್ರರಾಗಲಿದ್ದಾರೆ’ ಎಂದು ದಿಲೀಪ ಅರ್ಗೇಕರ್ ಹೇಳಿದ್ದಾರೆ. `ಸರ್ಕಾರ ಹಾಗೂ ಕಂಪನಿ ಹಣ ಮಾಡಲು ಈ ಯೋಜನೆ ಮಾಡುತ್ತಿದೆ. ಆದರೆ ತುತ್ತು ಅನ್ನಕ್ಕಾಗಿ ದುಡಿಯುವ ಮೀನುಗಾರರ ಕಷ್ಟವನ್ನು ಯಾರೂ ಆಲಿಸಿಲ್ಲ’ ಎಂದವರು ಅಳಲು ತೋಡಿಕೊಂಡಿದ್ದಾರೆ.
`ಈಗಾಗಲೇ ಕಾರವಾರದಲ್ಲಿ ಬಂದರು ಇದ್ದು ಕೇಣಿಯಲ್ಲಿ ಬಂದರು ಮಾಡಲು ಹೊರಟಿರುವುದು ಸರಿಯಲ್ಲ. ಇದರಿಂದ ಭವಿಷ್ಯದಲ್ಲಿ ಮೀನುಗಾರರು ಸಂಕಷ್ಟಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ. ಕೇಣಿ ಮೀನುಗಾರಿಕೆಯ ಕೇಂದ್ರವಾಗಿದ್ದು, ಈ ಜಾಗ ಕಸಿಯುವುದು ಸರಿಯಲ್ಲ’ ಎಂದು ಹೇಳಿದ್ದಾರೆ. `ಸಾರ್ವಜನಿಕ ಅಹವಾಲು ಸಭೆಯಲ್ಲಿ ಎಲ್ಲಾ ಮೀನುಗಾರರು ಒಗ್ಗಟ್ಟು ಪ್ರದರ್ಶಿಸಿ ಯೋಜನೆಗೆ ನಮ್ಮ ವಿರೋಧ ತೋರಿಸಬೇಕು’ ಎಂದು ಕರೆ ನೀಡಿದ್ದಾರೆ. `ಎಲ್ಲಾ ಭಾಗದಿಂದ ಮೀನುಗಾರರು ಆಗಮಿಸಿ ಯೋಜನೆಗೆ ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಬೇಕು. ಮೀನುಗಾರರ ಪರ ಮೀನು ಆಹಾರವನ್ನ ಅವಲಂಬಿತರಾಗಿರುವ ಹಾಗೂ ಜಿಲ್ಲೆಯ ಪರಿಸರದ ಮೇಲೆ ಕಾಳಜಿ ಇರುವ ಇತರೇ ಸಮುದಾಯದವರು ನಮ್ಮನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಸಂಘಟನೆ ಜಿಲ್ಲಾಧ್ಯಕ್ಷ ರೋಷನ್ ಹರಿಕಂತ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಹರಿಕಂತ್ರ, ಜಿಲ್ಲಾ ಉಪಾಧ್ಯಕ್ಷ ಭರತ್ ಕಾರ್ವಿ, ಸುನಿಲ್ ತಾಂಡೇಲ್, ಪ್ರವೀಣ್ ತಾಂಡೇಲ್, ಕಾರ್ಯದರ್ಶಿಗಳಾದ ಕೃಷ್ಣ ತಾಂಡೇಲ್, ರಾಹುಲ್ ತಾಂಡೇಲ್, ನಂದೀಶ್ ಮಜಾಳಿಕರ್, ರವಿ ಹೊಸ್ಕಟ್ಟ, ರಾಜು ತಾಂಡೇಲ್, ವಿನಾಯಕ್ ಕಾರ್ವಿ, ಮೋಹನ್ ಉಳ್ಳೇಕರ್, ದಿಲೀಪ್ ಉಳ್ವೇಕರ್. ಕೃಷ್ಣ ಕಾಮು ಹರಿಕಂತ್ರ, ವಿನಾಯಕ ಚಂದ್ರಕಾoತ್ ಹರಿಕಂತ್ರ ಹಾಗೂ ಮಹೇಶ್ ಹರಿಕಂತ್ರ ಒಗ್ಗಟ್ಟಿನಿಂದ ಬಂದರು ಯೋಜನೆಯನ್ನು ವಿರೋಧಿಸಿದ್ದಾರೆ.
Discussion about this post