ಯಲ್ಲಾಪುರದ ಕಳಚೆಯ ರಾಮಕೃಷ್ಣ ಭಟ್ಟ ಅವರಿಗೆ ಮದುವೆ ಮಾಡಿಸುವುದಾಗಿ ನಂಬಿಸಿ ಮೂವರು ಮೋಸ ಮಾಡಿದ್ದಾರೆ. ಉತ್ತರ ಭಾರತದ ಯುವತಿಯನ್ನು ಮದುವೆ ಮಾಡಿಸಲು 6 ಲಕ್ಷ ರೂ ಹಣಪಡೆದು ಯಾಮಾರಿಸಿದ್ದಾರೆ.
ಕಳಚೆ ಕರಿಮನೆಯಲ್ಲಿ ವಾಸವಾಗಿರುವ ರಾಮಕೃಷ್ಣ ಭಟ್ಟರು ಪುರೋಹಿತ್ಯ ಮಾಡಿಕೊಂಡಿದ್ದರು. 37 ವರ್ಷವಾದರೂ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿರಲಿಲ್ಲ. ಇದನ್ನು ಅರಿತ ಸದ್ಯ ಸೋಂದಾ ಮಠದಲ್ಲಿ ವಾಸವಾಗಿರುವ ಕಳಚೆ ಸೂತ್ರೆಮನೆ ಲಕ್ಷ್ಮೀನಾರಾಯಣ ಭಟ್ಟ, ಸೋಂದಾ ಬಕ್ಕಳದ ನಾಗರಾಜ ಭಟ್ಟ ಹಾಗೂ ಉತ್ತರ ಪ್ರದೇಶ ರೇಣುಕಾಕೋಟದ ಮಾಲಾ ಜಿ ತ್ರಿಪಾಠಿ ರಾಮಕೃಷ್ಣ ಭಟ್ಟರಿಗೆ ಮದುವೆ ಮಾಡಿಸುವ ಜವಾಬ್ದಾರಿವಹಿಸಿಕೊಂಡರು. ಉತ್ತರ ಪ್ರದೇಶದಿಂದ ಕನ್ಯೆ ಕೊಡಿಸುವ ಮಾತನಾಡಿ, ವ್ಯವಹಾರವನ್ನು ಮುಗಿಸಿದರು.
ಅದರ ಪ್ರಕಾರ, ರಾಮಕೃಷ್ಣ ಭಟ್ಟರಿಂದ 6 ಲಕ್ಷ ರೂ ಹಣಪಡೆದರು. ಉತ್ತರ ಪ್ರದೇಶ ಗೋಪಾಲಪುರದ ಪೂಜಾ ಮಿಶ್ರಾ ಜೊತೆ ರಾಮಕೃಷ್ಣ ಭಟ್ಟರ ಸಂಬಂಧ ಬೆಸೆಯುವ ಸಿದ್ಧತೆ ನಡೆಸಿದರು. ಲಕ್ಷ್ಮೀನಾರಾಯಣ ಭಟ್ಟ, ನಾಗರಾಜ ಭಟ್ಟ ಹಾಗೂ ಮಾಲಾ ಜಿ ತ್ರಿಪಾಠಿ ಸೇರಿ ರಾಮಕೃಷ್ಣ ಭಟ್ಟರನ್ನು ಉತ್ತರ ಪ್ರದೇಶಕ್ಕೆ ಕರೆದೊಯ್ದರು. ಗೋಪಾಲಪುರದ ಪೂಜಾ ಮಿಶ್ರಾ ಅವರನ್ನು ಪರಿಚಯಿಸಿ ಅಲ್ಲಿಯೇ ನಿಶ್ಚಿತಾರ್ಥವನ್ನು ಮಾಡಿಸಿದರು.
ಅದಾದ ನಂತರ ಪೂಜಾ ಮಿಶ್ರಾ ಅವರು ರಾಮಕೃಷ್ಣ ಭಟ್ಟರನ್ನು ಭೇಟಿಯಾಗಲು ಕಳಚೆಗೆ ಬಂದಿದ್ದರು. ಅಗಸ್ಟ 17ರಂದು ಬೆಳಗ್ಗೆ `ವಾಕಿಂಗ್ ಹೋಗೋಣ’ ಎಂದು ರಾಮಕೃಷ್ಣ ಭಟ್ಟರನ್ನು ಕರೆದೊಯ್ದ ಪೂಜಾ ಮಿಶ್ರಾ ಅವರು ಭಟ್ಟರನ್ನು ರಸ್ತೆ ಬದಿಗೆ ದೂಡಿ ಪರಾರಿಯಾದರು. `ಮದುವೆಯನ್ನು ಮಾಡಿಸಲಿಲ್ಲ. ಕೊಟ್ಟ ಕಾಸು ಮರಳಿಸಲಿಲ್ಲ’ ಎಂಬ ಕಾರಣಕ್ಕೆ ಮದುವೆಯಾಗದ ಪೂಜಾ ಮಿಶ್ರಾ ವಿರುದ್ಧ ರಾಮಕೃಷ್ಣ ಭಟ್ಟರು ಪೊಲೀಸ್ ದೂರು ನೀಡಿದರು. ಅವರ ಜೊತೆ ಲಕ್ಷ್ಮೀನಾರಾಯಣ ಭಟ್ಟ, ನಾಗರಾಜ ಭಟ್ಟ ಹಾಗೂ ಮಾಲಾ ಜಿ ತ್ರಿಪಾಠಿ ಅವರಿಂದಲೂ ಅನ್ಯಾಯವಾದ ಬಗ್ಗೆ ವಿವರಿಸಿದರು.
ಈ ಎಲ್ಲಾ ವಿಷಯ ಆಲಿಸಿದ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದರು. ಪಿಎಸ್ಐ ಪಿಎಸ್ಐ ಶೇಡಜಿ ಚೌಹ್ಹಾಣ್ ತನಿಖೆ ನಡೆಸುತ್ತಿದ್ದಾರೆ. ಪಿಐ ರಮೇಶ ಹಾನಾಪುರ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷಿ ಸಂಗ್ರಹಿಸಿದ್ದಾರೆ.
