ಅಂಕೋಲಾದ ಕೇಣಿಯಲ್ಲಿ ಬಂದರು ನಿರ್ಮಾಣದ ಹೂಡಿಕೆಗೆ ಆಸಕ್ತಿವಹಿಸಿದ JSW ಕಂಪನಿ ಅಧಿಕಾರಿಯೊಬ್ಬರು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅವರ ಪತ್ನಿ ಮನೆಯಲ್ಲಿದ್ದಾರೆ. ಬಂದರು ಯೋಜನೆಯನ್ನು ವಿರೋಧಿಸಿರುವ ಗೋಪಾಲಕೃಷ್ಣ ನಾಯಕ ಅವರು ಆ ಅಧಿಕಾರಿಗೆ ಮನೆಯಿಂದ ಹೊರ ಹೋಗುವಂತೆ ಸೂಚಿಸಿದ್ದಾರೆ!
ಗೋಪಾಲಕೃಷ್ಣ ನಾಯಕ ಅವರ ಪತ್ನಿ ಕಾರವಾರದವರು. ಅವರ ಅಲ್ಲಿನ ಮನೆಯಲ್ಲಿ ಕೇಣಿ ಬಂದರು ಯೋಜನೆಯ ಹೂಡಿಕೆದಾರರಾದ ಜೆಎಸ್‌ಡಬ್ಲು ಕಂಪನಿಯವರು ಬಾಡಿಗೆಗೆ ಬಂದಿದ್ದಾರೆ. ತಿಂಗಳಿಗೆ 6 ಸಾವಿರ ರೂ ಬಾಡಿಗೆ ಕೊಡುತ್ತಿದ್ದಾರೆ. ಈ ವಿಷಯ ಗೋಪಾಲಕೃಷ್ಣ ನಾಯಕ ಅವರ ವಿರೋಧಿಗಳಿಗೆ ಗೊತ್ತಾಗಿದ್ದು, ಗೋಪಾಲಕೃಷ್ಣ ನಾಯಕ ಅವರ ನೈತಿಕತೆಯ ಬಗ್ಗೆ ಅವರ ವಿರೋಧಿಗಳು ಪ್ರಶ್ನೆ ಮಾಡಿದ್ದಾರೆ. ಬಂದರು ವಿರೋಧಿ ಹೋರಾಟ ನಡೆಸುತ್ತಿರುವ ತಮ್ಮ ಆಪ್ತರ ಮನೆಯಲ್ಲಿ ಕಂಪನಿಯವರು ಬಾಡಿಗೆಗಿರುವ ವಿಷಯ ಅರಿತ ಗೋಪಾಲಕೃಷ್ಣ ನಾಯಕ ಅವರು 30 ದಿನದಲ್ಲಿ ಮನೆ ಖಾಲಿ ಮಾಡುವಂತೆ ಆ ಕಂಪನಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಂಕೋಲಾದ ಸ್ವಾತಂತ್ರ ಭವನದಲ್ಲಿ ನಡೆದ ಅಹವಾಲು ಸಭೆಯಲ್ಲಿ ಸ್ವತಃ ಗೋಪಾಲಕೃಷ್ಣ ನಾಯಕ ಅವರೇ ಈ ವಿಷಯ ಬಹಿರಂಗಪಡಿಸಿದರು. `ನನ್ನ ಪತ್ನಿ ಮನೆಯಲ್ಲಿ ಕಂಪನಿ ಅಧಿಕಾರಿಗಳು ಬಾಡಿಗೆಗಿರುವ ಬಗ್ಗೆ ಕಾರವಾರದ ಮಹಾಶಯರೊಬ್ಬರು ಪ್ರಶ್ನಿಸುತ್ತಿದ್ದಾರೆ. ಬೇಲಿಕೇರೆಯಲ್ಲಿರುವ ಅವರ ಬಂಟರ ಮೂಲಕ ನನಗೆ ಸುದ್ದಿ ಮುಟ್ಟಿಸಿದ್ದಾರೆ. ಅವರು ಈ ಸುದ್ದಿ ಮುಟ್ಟಿಸುವ ಮುನ್ನವೇ ಕಂಪನಿಯವರಿಗೆ ಮನೆ ಖಾಲಿ ಮಾಡುವಂತೆ ತಿಳಿಸಿದ್ದೇನೆ. ಈ ಬಗ್ಗೆ ಕೇಣಿಯಲ್ಲಿರುವ ಸ್ನೇಹಿತರಿಗೂ ಹೇಳಿದ್ದೇನೆ’ ಎನ್ನುತ್ತ ಗೋಪಾಲಕೃಷ್ಣ ನಾಯಕ ಅವರು ಮಾತು ಮುಂದುವರೆಸಿದರು.
ಆದರೆ, ಅಧಿಕಾರಿಗಳು ಅವರ ಮಾತಿಗೆ ತಡೆ ಒಡ್ಡಿದರು. `ವಿಷಯಕ್ಕೆ ಸಂಬOಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳಿ’ ಎಂದು ಅಧಿಕಾರಿಗಳು ಸೂಚಿಸಿದರು. ಆಗ, ಗೋಪಾಲಕೃಷ್ಣ ನಾಯಕ ಅವರು `ಈ ದಿನ ಅಹವಾಲು ಸಭೆ ನಡೆಸಿರುವುದೇ ನಿಯಮಬಾಹಿರ. ಅಹವಾಲು ಸಭೆ ಹಿಂದಿನ ದಿನ ರಾತ್ರಿ ಯಾರ ಮನೆಯಲ್ಲಿ ಯಾರು ಏನು ಮಾತನಾಡಿದ್ದಾರೆ? ಬಂದರು ಪರ ಕೆಲಸ ಮಾಡಬೇಕು ಎಂದು ಯಾರು ಯಾರಿಗೆ ಸೂಚನೆ ನೀಡಿದ್ದಾರೆ? ಎನ್ನುವುದರ ಬಗ್ಗೆ ಅರಿವಿದೆ. `ಬೇರೆ ಯಾರಿಗೋ ಅನುಕೂಲ ಮಾಡಿಕೊಡುವುದಕ್ಕಾಗಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಬೇಡ’ ಎಂದು ಹೇಳಿದರು.
ಮೀನುಗಾರರ ಸಮಸ್ಯೆ ಹಾಗೂ ಕೇಣಿ ಸುತ್ತಮುತ್ತಲ ಜನರ ಸಮಸ್ಯೆಯ ಬಗ್ಗೆ ಅಹವಾಲು ಸಭೆಯಲ್ಲಿ ವಿಷಯ ಮಂಡಿಸಿ ಅನೇಕ ಪ್ರಶ್ನೆಗಳನ್ನು ಅವರು ಕೇಳಿದರು. `ಬಂದರು ಬಂದರೆ ಮೀನುಗಾರರಿಗೆ ಸಮಸ್ಯೆ ಖಚಿತ’ ಎಂಬರ್ಥದಲ್ಲಿ ಅವರು ಮಾತನಾಡಿದರು. `ಬಂದರು ವಿಷಯದಲ್ಲಿ ನನಗೂ ಅನೇಕ ಒತ್ತಡ, ಆಮೀಷಗಳು ಬಂದಿವೆ. ಆದರೆ, ಅದನ್ನು ಬದಿಗೊತ್ತಿ ನಾನು ಮೀನುಗಾರರ ಪರ ಹೋರಾಟಕ್ಕೆ ನಿರ್ಧರಿಸಿದ್ದೇನೆ’ ಎಂದು ಅವರು ಘೋಷಿಸಿದರು.
Discussion about this post