ಅಂಕೋಲಾದ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣ ವಿಷಯವಾಗಿ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಶುಕ್ರವಾರ ಸಾರ್ವಜನಿಕ ಅಹವಾಲು ಸಭೆ ನಡೆದಿದ್ದು, ಸಭೆಗೆ ಆಗಮಿಸಿದ್ದ ಬಹುತೇಕರು ಬಂದರು ನಿರ್ಮಾಣವನ್ನು ವಿರೋಧಿಸಿದರು.
`ಬಂದರು ಬೇಕು’ ಎಂದು ಕೆಲವರು ನಕಲಿ ವಿಳಾಸದ ಸಹಿಯೊಂದಿಗೆ ಅರ್ಜಿ ಸಲ್ಲಿಸಿದನ್ನು ಸಹ ಸ್ಥಳೀಯ ಮೀನುಗಾರರು ಪತ್ತೆ ಮಾಡಿ ಅವರ ವಿರುದ್ಧ ಆಕ್ರೋಶಹೊರಹಾಕಿದರು. ಸಭೆಯಲ್ಲಿ 700 ಜನರಿಗೆ ಮಾತ್ರ ಆಸನ ವ್ಯವಸ್ಥೆ ಮಾಡಲಾಗಿದ್ದು, 8 ಸಾವಿರಕ್ಕೂ ಅಧಿಕ ಜನ ಆವರಣದಲ್ಲಿ ನೆರೆದಿದ್ದರು. ಅವರಿಗೆ ಹೊರಗೆ ಪೆಂಡಾಲ್ ಹಾಕಿ ಕೂರ್ಚಿ ಕೊಡಲಾಯಿತು. ತಾಸುಗಳ ಕಾಲ ಸರದಿ ಸಾಲಿನಲ್ಲಿ ನಿಂತು ಜನ ಬಂದರು ವಿರುದ್ಧ ಪತ್ರ ಕೊಟ್ಟರು. ಸಭೆಗೆ ಆಗಮಿಸುವ ಪ್ರತಿಯೊಬ್ಬರ ವಿವರ ದಾಖಲಿಸಿ ಅವರನ್ನು ಒಳಗೆ ಬಿಡಲಾಯಿತು.
ಪರವಾಗಿ ಅರ್ಜಿ ಕೊಟ್ಟವರಿಗೆ 500ರೂ!
ಬಂದರು ವಿರುದ್ಧ ಸಾವಿರಾರು ಜನ ಅರ್ಜಿ ಕೊಟ್ಟಿದ್ದು, ಬಂದರು ಪರವಾಗಿ ಅರ್ಜಿ ಕೊಟ್ಟವರಿಗೆ ಕಂಪನಿಯವರು 500ರೂ ನೀಡಿದ ಬಗ್ಗೆ ಸಭೆಯ ಹೊರಗೆ ಚರ್ಚೆಯಾಯಿತು. ಬೇರೆ ಬೇರೆ ತಾಲೂಕಿನಿಂದ ಬಂದ ಜನ ಈ ವಿಷಯವನ್ನು ಬಾಯ್ಬಿಟ್ಟರು. ಹಣದ ಆಮೀಷ ಒಡ್ಡಿ ಜನರನ್ನು ಕರೆತಂದಿದನ್ನು ಸ್ಥಳೀಯರು ಪತ್ತೆ ಮಾಡಿದರು. ಕಂಪನಿ ವಿರುದ್ಧ ಜನ ಧಿಕ್ಕಾರ ಕೂಗಿದರು. ಹಣಪಡೆದು ಬಂದರು ಪರ ಅರ್ಜಿ ನೀಡಲು ಬಂದವರನ್ನು ಜನ ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿ ಬಿಟ್ಟು ಕಳುಹಿಸಿದಕ್ಕೂ ಆಕ್ರೋಶವ್ಯಕ್ತವಾಯಿತು.
ಕನ್ನಡಕ್ಕೆ ಇಲ್ಲ ಮನ್ನಣೆ!
ಯೋಜನೆಯ ವರದಿ ಕನ್ನಡದಲ್ಲಿ ಇಲ್ಲದ ಬಗ್ಗೆ ಅನೇಕರು ಅಸಮಧಾನವ್ಯಕ್ತಪಡಿಸಿದರು. 600 ಪುಟದ ವರದಿಯನ್ನು ಕನ್ನಡದಲ್ಲಿ 40 ಪುಟಕ್ಕೆ ಸೀಮಿತಗೊಳಿಸಿರುವುದನ್ನು ಪ್ರಶ್ನಿಸಿದರು. ಸಭೆ ಆರಂಭವಾಗುತ್ತಿದ್ದoತೆ ನೆರೆದ ಸಭಿಕರು `ಕರಪತ್ರ ಹಿಡಿದು ನಾವು ಕನ್ನಡಿಗರು ಇಐಎ ವರದಿಯ ಸಂಪೂರ್ಣ ಸಾರಾಂಶವು ಕನ್ನಡದಲ್ಲಿ ಬೇಕು’ ಎಂದು ಕಾಣಿಸಿದರು. ಅಹವಾಲು ಸಭೆಯಲ್ಲಿ ನಾಗರಿಕರ ಪ್ರತಿಯೊಂದು ಪ್ರಶ್ನೆಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಸಂತೋಷ ಅವರು ಯಾವುದೇ ಉತ್ತರ ನೀಡಲಿಲ್ಲ. ಎಲ್ಲಾ ಪ್ರಶ್ನೆಗೂ ನಿ`ಮ್ಮ ಅಹವಾಲನ್ನು ರೇಕಾರ್ಡ್ ಮಾಡಿಕೊಳ್ಳಲಾಗುತ್ತಿದೆ’ ಎನ್ನುತ್ತಿದ್ದರು. ಈ ವೇಳೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಸಂತೋಷ ತೀವ್ರ ತರಾಟೆಗೆ ಒಳಗಾಗಿ ಮುಜುಗರಕ್ಕೆ ಒಳಗಾದರು.
Discussion about this post