`ಉತ್ತರ ಕನ್ನಡ ಜಿಲ್ಲೆಯಲ್ಲಿ ಬೃಹತ್ ಯೋಜನೆಗಳನ್ನು ಸ್ಥಾಪಿಸುವ ಮುನ್ನ ಭೂಮಿಯ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಪಶ್ಚಿಮಘಟ್ಟ ಕಾರ್ಯಪಡೆ ನಿಕಟಪೂರ್ವ ಅಧ್ಯಕ್ಷ ಅನಂತ ಅಶೀಸರ ಸಹ ಆ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನ್ಯಾಯವಾದಿ ರವೀಂದ್ರ ನಾಯ್ಕ ಅವರು ಇದೀಗ ಅದೇ ಮಾತನ್ನು ಪುನರುಚ್ಚಿರಿಸಿದ್ದಾರೆ. ಅನೇಕ ತಜ್ಞರು ಈ ಬಗ್ಗೆ ಒತ್ತಾಯಿಸುತ್ತಿದ್ದರೂ ಅಧ್ಯಯನ ಕಾರ್ಯ ಮಾತ್ರ ನಡೆಯುತ್ತಿಲ್ಲ.
ಜನ ವಿರೋಧದ ನಡುವೆಯೂ ಅಂಕೋಲಾದ ಕೇಣಿಯಲ್ಲಿ ಗ್ರೀನ್ ಫೀಲ್ಡ್ ಬಂದರು ನಿರ್ಮಾಣ ಪ್ರಯತ್ನ ನಡೆಯುತ್ತಿದೆ. ಹೊನ್ನಾವರದ ಕಾಸರಗೋಡ ವಾಣಿಜ್ಯ ಬಂದರು ನಿರ್ಮಾಣದ ಕೆಲಸ ಶುರುವಾಗಿದೆ. ಜೊತೆಗೆ ಅಲ್ಲಿ ಶರಾವತಿ ಪಂಪ್ಡ ಸ್ಟೋರೇಜ್ ಯೋಜನೆಗೂ ಸರ್ಕಾರ ಆಸಕ್ತಿವಹಿಸಿದೆ. ಇದರೊಂದಿಗೆ ಬೇಡ್ತಿ – ವರದಾ ನದಿ ಜೋಡಣೆಯ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ಈ ಎಲ್ಲಾ ಯೋಜನೆಗಳು ಜಿಲ್ಲೆಗೆ ಬಾರವಾಗಿದ್ದರೂ ಜನಾಭಿಪ್ರಾಯಕ್ಕೆ ಮನ್ನಣೆ ಸಿಕ್ಕಿಲ್ಲ. ತಜ್ಞರು, ನ್ಯಾಯವಾದಿಗಳು ಹಾಗೂ ಜನಪ್ರತಿನಿಧಿಗಳ ಮಾತಿಗೂ ಬೆಲೆ ಸಿಗುತ್ತಿಲ್ಲ.
ಈ ಎಲ್ಲ ಹಿನ್ನಲೆ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಸರ್ಕಾರಕ್ಕೆ ಪತ್ರ ಬರೆದು ಎಚ್ಚರಿಸಿದ್ದಾರೆ. `ಜನಾಭಿಪ್ರಾಯ ಮತ್ತು ಜಿಲ್ಲೆಯ ಭೌಗೋಳಿಕ ಧಾರಣ ಸಾಮರ್ಥ್ಯ ಪರಿಗಣಿಸಿ ವೈಜ್ಙಾನಿಕ ಅಧ್ಯಯನದ ಆಧಾರದ ಮೇಲೆ ಯೋಜನೆಗಳ ಬಗ್ಗೆ ಸೂಕ್ತ ತೀರ್ಮಾನ ನಡೆಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ. `ದಟ್ಟ ಅರಣ್ಯ, ನದಿ, ಸಮುದ್ರ ಕಿನಾರೆ ವಿಭಿನ್ನ ಸಂಸ್ಕೃತಿಯನ್ನು ಹೊಂದಿರುವ ಜಿಲ್ಲೆಯಲ್ಲಿ ಈಗಾಗಲೇ 5 ಹೈಡ್ರೋ ಪ್ರೋಜೆಕ್ಟ, ಕೈಗಾ ಅಣುಸ್ಥಾವರ, ಸೀಬರ್ಡ, ಕೊಂಕಣ ರೈಲ್ವೇ ಯೋಜನೆ ಜಾರಿಯಲ್ಲಿರುವುದನ್ನು ಅವರು ನೆನಪಿಸಿದ್ದಾರೆ. `ರಾಷ್ಟಿಯ ಯೋಜನೆಗಳಿಗೆ ತ್ಯಾಗ ಮಾಡಿದವರ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.
ಕಾಳಿ ಟೈಗರ್ ಝೋನ್, ಅಭಯಾರಣ್ಯ, ಸಿಂಗಳೀಕ, ಸಿ ಆರ್‌ಜಡ್ ಮುಂತಾದ ಪರಿಸರ ಪೂರಕ ಯೋಜನೆಗಳ ಮೇಲೆಯೂ ಅಭಿವೃದ್ಧಿ ಹೆಸರಿನಲ್ಲಿ ಬರುವ ಮಾರಕ ಯೋಜನೆಗಳು ಪರಿಣಾಮ ಬೀರುವುದರ ಬಗ್ಗೆ ಮಾತನಾಡಿದ್ದಾರೆ. `ಮುಂಬರುವ ದಿನಗಳಲ್ಲಿ ಅಭಿವೃದ್ಧಿ ದಿಸೆಯಲ್ಲಿ ವಿಮಾನ ನಿಲ್ದಾಣ, ಹುಬ್ಬಳ್ಳಿ-ಅಂಕೋಲ ರೈಲ್ವೇ ಸಹ ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಈ ಎಲ್ಲ ಯೋಜನೆಗಳಿಗೆ ಜಿಲ್ಲೆಯ ಜನ ತ್ಯಾಗ ಮಾಡಿರುವುದು ವಿಶೇಷ’ ಎಂದವರು ಸ್ಮರಿಸಿದ್ದಾರೆ.
`ಜಿಲ್ಲೆಯ ಒಟ್ಟು ಭೌಗೋಳಿಕವಾಗಿ 10.25 ಲಕ್ಷ ಹೆಕ್ಟೇರ್‌ಗಳಲ್ಲಿ 8.28 ಲಕ್ಷ ಹೆಕ್ಟೇರ್‌ಗಳು ಅರಣ್ಯ ಪ್ರದೇಶ ಹೊಂದಿದೆ. ಕೇವಲ 1.2 ಲಕ್ಷ ಹೆಕ್ಟೇರ್ ಭೂ ಭಾಗದಿಂದ ಕೂಡಿದೆ. ಆ ಪೈಕಿ ಶೇ 10ರಷ್ಟು ಕೃಷಿ ಮತ್ತು ತೋಟಗಾರಿಕೆಗೆ ಜನ ಬಳಕೆ ಮಾಡುತ್ತಿದ್ದಾರೆ. ಇದರಿಂದ, ವಿರೋಧಕ್ಕೆ ಹೆಚ್ಚಿನ ಮಹತ್ವ ಬರಲು ಕಾರಣವಾಗಿದೆ’ ಎಂದು ಅವರು ಹೇಳಿದ್ದಾರೆ. `ಯೋಜನಾ ಅನುಷ್ಠಾನ ಪೂರ್ವದಲ್ಲಿ ಜನಾಭಿಪ್ರಾಯ ಮತ್ತು ಯೋಜನೆಯ ಪರವಾಗಿರುವ ಅಂಶವನ್ನು ಜನರಿಗೆ ಮನವರಿಕೆ ಮಾಡದೇ ಕೇಂದ್ರ ಸರ್ಕಾರವು ಯೋಜನೆಗಳಿಗೆ ಅನುಮೋದನೆ ನೀಡಿರುವದನ್ನು ಸಾರ್ವಜನಿಕರಿಂದ ಪ್ರಶ್ನಿಸಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.
Discussion about this post