ರಸ್ತೆ ಬದಿ ನಿಂತಿದ್ದ ನಾಲ್ವರು ಅಪರಿಚಿತರಿಗೆ ಸಹಾಯ ಮಾಡಲು ಹೋಗಿದ್ದ ಉತ್ತರ ಕನ್ನಡದ ಮೆಕಾನಿಕ್ ಮಹ್ಮದ್ ಶೇಖ್ ಎಂಬಾತರು ಅಪಹರಣಕ್ಕೆ ಒಳಗಾಗಿದ್ದಾರೆ. ಅಪಹರಣಕಾರರು ಮಹ್ಮದ್ ಶೇಖ್ ಅವರ ಬಳಿಯಿದ್ದ ಮೊಬೈಲ್, ಉಂಗುರ, ಹಣ ಹಾಗೂ ಕಾರನ್ನು ಕದ್ದು ಪರಾರಿಯಾಗಿದ್ದಾರೆ.
ಜೊಯಿಡಾ ಕುಂಬಾರವಾಡದ ಮಹ್ಮದ್ ಶೇಖ್ ಅಪಹರಣಕ್ಕೆ ಒಳಗಾದವರಾಗಿದ್ದು, ಎಲ್ಲವನ್ನು ಕಳೆದುಕೊಂಡ ನಂತರ ಮುಖಕ್ಕೆ ಕಪ್ಪು ಟೋಪಿ ಹಾಕಿದ್ದ ಸ್ಥಿತಿಯಲ್ಲಿ ಅವರು ಶಿವಮೊಗ್ಗದ ಅಡಿಕೆ ತೋಟದಲ್ಲಿ ಪತ್ತೆಯಾಗಿದ್ದಾರೆ. ದುಷ್ಕರ್ಮಿಗಳು ಮಹ್ಮದ್ ಶೇಖ್ ಅವರನ್ನು ಬಿಡುಗಡೆ ಮಾಡುವ ಮುನ್ನ ಹಿಗ್ಗಾ-ಮುಗ್ಗ ಥಳಿಸಿ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ದೋಚಿದ್ದಾರೆ.
ಅಗಸ್ಟ 22ರ ಮಧ್ಯಾಹ್ನ ಜೊಯಿಡಾದಿಂದ ಕುಂಬಾರವಾಡಕ್ಕೆ ಮಹ್ಮದ್ ಶೇಖ್ ಅವರು ತಮ್ಮ ಮಾರುತಿ 800 ಕಾರಿನಲ್ಲಿ ಅವರು ಹೋಗುತ್ತಿದ್ದರು. ಜೊಯಿಡಾದ ದೇಸಾಯಿ ಪೆಟ್ರೋಲ್ ಬಂಕಿನಿoದ ಸ್ವಲ್ಪ ಮುಂದೆ 4 ಜನ ಅಪರಿಚಿತರು ನಿಂತಿದ್ದರು. ಅವರು ಮಹ್ಮದ್ ಶೇಖ್ ಅವರ ಕಾರಿಗೆ ಅಡ್ಡಲಾಗಿ ಕೈ ಮಾಡಿದರು. `ನಮ್ಮ ಕಾರು ಹಾಳಾಗಿದೆ. ಹತ್ತಿರದ ಊರಿಗೆ ನಮ್ಮನ್ನು ಬಿಡಿ’ ಎಂದು ಆ ನಾಲ್ವರು ಅಂಗಲಾಚಿದರು. ದಟ್ಟ ಕಾಡಿನಲ್ಲಿ ಕಾರು ಹಾಳಾಗಿ ನಿಂತರ ಅವರನ್ನು ನೋಡಿದ ಮಹ್ಮದ್ ಶೇಖ್ ಅವರು ಕುಂಬಾರವಾಡ ಬಸ್ ನಿಲ್ದಾಣಕ್ಕೆ ಬಿಡಲು ಒಪ್ಪಿಕೊಂಡರು.
ಮಹ್ಮದ್ ಶೇಖ್ ಅವರು ಓಡಿಸುತ್ತಿದ್ದ ಕಾರನ್ನು ಹತ್ತಿದ ಆ ನಾಲ್ವರು `ನಮಗೆ ಕಾರವಾರಕ್ಕೆ ಹೋಗಬೇಕು. ಯಾವುದಾದರೂ ಬಾಡಿಗೆ ಕಾರ್ ಇದ್ದರೆ ಮಾಡಿಕೊಡಿ’ ಎಂದು ಮನವಿ ಮಾಡಿದರು. ಆಗ ಮಹ್ಮದ್ ಶೇಖ್ ಅವರು `ನನ್ನ ಅಣ್ಣನ ಬಾಡಿಗೆ ಕಾರ್ ಇದೆ. ಕೇಳಿ ತಿಳಿಸುವೆ’ ಎಂದು ಅಣ್ಣ ಜುಬೇದ್ ಅವರಿಗೆ ಫೋನ್ ಮಾಡಿದರು. ಆಗ, ಜುಬೇದ್ ಅವರು `ಮನೆಯಲ್ಲಿರುವ ಕಾರಿನಲ್ಲಿ ಅವರನ್ನು ಕಾರವಾರಕ್ಕೆ ಬಿಟ್ಟು, ಬಾಡಿಗೆ ಹಣಪಡೆದು ಬಾ’ ಎಂದರು. ಹೀಗಾಗಿ ಕುಂಬಾರವಾಡದ ಮನೆಯಲ್ಲಿದ್ದ ಕಾರಿನಲ್ಲಿ ಆ ನಾಲ್ವರನ್ನು ಮಹ್ಮದ್ ಶೇಖ್ ಅವರು ಕಾರವಾರಕ್ಕೆ ಕರೆದೊಯ್ದರು. ಸದಾಶಿವಗಡದ ಬಳಿ ಕಾರು ಸಮೀಪಿಸಿದಾಗ `ನಮಗೆ ಬಿಯರ್ ಕುಡಿಯಬೇಕು. ಕಾರನ್ನು ಗೋವಾ ಗಡಿಗೆ ತಿರುಗಿಸು’ ಎಂದು ಆ ನಾಲ್ವರು ತಾಕೀತು ಮಾಡಿದರು.
ಅದರ ಪ್ರಕಾರ, ಮಹ್ಮದ್ ಶೇಖ್ ಅವರು ಕಾರನ್ನು ಗೋವಾ ಕಡೆ ಓಡಿಸಿದರು. ಗಡಿಯಲ್ಲಿ ಚಿಕನ್ ಹಾಗೂ ಬಿಯರ್ ತೆಗೆದುಕೊಂಡ ನಂತರ ಆ ನಾಲ್ವರನ್ನು ಮಹ್ಮದ್ ಶೇಖ್ ಅವರು ಕಾರವಾರ ಬಸ್ ನಿಲ್ದಾಣಕ್ಕೆ ಬಿಟ್ಟರು. `ಶಿವಮೊಗ್ಗಕ್ಕೆ ಈಗ ಬಸ್ ಇಲ್ಲ. ಹೀಗಾಗಿ ಇದೇ ಕಾರಿನಲ್ಲಿ ನಮ್ಮನ್ನು ಶಿವಮೊಗ್ಗಕ್ಕೆ ಬಿಡಿ’ ಎಂದು ಆ ನಾಲ್ವರು ಹೇಳಿದರು. ಮತ್ತೆ ಅಣ್ಣ ಜುಬೇದ್ ಅವರಿಗೆ ಮಹ್ಮದ್ ಶೇಖ್ ಫೋನ್ ಮಾಡಿದ್ದು `ಅಂಕೋಲಾದಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಅವರನ್ನು ಹೊನ್ನಾವರ ಮಾರ್ಗವಾಗಿ ಶಿವಮೊಗ್ಗಕ್ಕೆ ಬಿಟ್ಟು ಬಾ’ ಎಂದು ಜುಬೇದ್ ಸೂಚನೆ ನೀಡಿದರು.
ಕಾರು ಗೇರುಸೊಪ್ಪ ದಾಟಿದಾಗ ಕಾರಿನಲ್ಲಿದ್ದ ನಾಲ್ವರಲ್ಲಿ ಮೂವರು ಇಳಿದು ಫೈಡ್ ರೈಸ್ ತಿಂದರು. ಮಹ್ಮದ್ ಶೇಖ್ ಅವರಿಗೆ ಅವರು ಆಹಾರ ಕೊಡದಿದ್ದರೂ ಅದಕ್ಕಾಗಿ ಮಹ್ಮದ್ ಶೇಖ್ ಬೇಸರಿಸಿಕೊಳ್ಳಲಿಲ್ಲ. ಅದಾದ ನಂತರ ಕಾರು ಮತ್ತೆ ಮುಂದೆ ಚಲಿಸಿದಾಗ ಕಾರಿನಲ್ಲಿದ್ದ ಒಬ್ಬರು ಸಾಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇಳಿದು ಬಿಯರ್ ಬಾಟಲಿ ತಂದರು. ಅದಾದ ನಂತರ ಕಾರು ಮತ್ತೆ ಶಿವಮೊಗ್ಗದ ಕಡೆ ಚಲಿಸಿದ್ದು, ರಾತ್ರಿ 10 ಗಂಟೆಗೆ ಎಲ್ಲರೂ ಸೇರಿ ಕಾರು ನಿಲ್ಲಿಸಿದರು.
ಆಗ, ಕಾರಿನಲ್ಲಿದ್ದ ಇಬ್ಬರು ಕೆಳಗಿಳಿದು ಮಹಮದ್ ಶೇಖ್ ಅವರು ಕುಳಿತಿದ್ದ ಡ್ರೈವರ್ ಸೀಟ್ ಕಡೆ ಬಂದರು. ಮಹ್ಮದ್ ಶೇಖ್ ಅವರು ಆತಂಕದಿoದ `ಏನಾಯ್ತು?’ ಎಂದು ಪ್ರಶ್ನಿಸಿದರು. `ನಾವು ನಿನ್ನನ್ನು ಕಿಡ್ನಾಪ್ ಮಾಡಿದ್ದೇವೆ’ ಎಂದು ಆ ನಾಲ್ವರು ದೊಡ್ಡದಾಗಿ ನಕ್ಕು ಬೆದರಿಸಿದರು. `ನಿಮಗೆ ಸಹಾಯ ಮಾಡಿ, ಇಲ್ಲಿಯವರೆಗೆ ಕರೆತಂದಿದ್ದು ತಪ್ಪಾಯಿತು’ ಎಂದು ಮಹ್ಮದ್ ಶೇಖ್ ಹೇಳಿದರು. ಅದರಿಂದ ಸಿಟ್ಟಾದ ಅಪಹರಣಕಾರರು ಮಹ್ಮದ್ ಶೇಖ್ ಅವರ ಮುಖಕ್ಕೆ ಬಾರಿಸಿದರು. `ನೀನು ನಮ್ಮನ್ನು ಕರೆತಂದಿದ್ದು ಅಲ್ಲ. ನಾವೇ ಕಿಡ್ನಾಪ್ ಮಾಡಿ ನಿನ್ನನ್ನು ಇಲ್ಲಿ ತಂದಿದ್ದೇವೆ’ ಎನ್ನುತ್ತ ಕೈಯಲ್ಲಿದ್ದ ಛತ್ರಿಯಿಂದ ಹೊಡೆದರು.
ಮಹ್ಮದ್ ಶೇಖ್ ಅವರ ಬಳಿಯಿದ್ದ ಮೊಬೈಲ್, ವಾಚ್, ಉಂಗುರ ಹಾಗೂ 1 ಸಾವಿರ ರೂ ಹಣವನ್ನು ಅವರು ದೋಚಿದರು. ಅದಾದ ನಂತರ ಮಹ್ಮದ್ ಅವರ ಮೊಬೈಲಿನಿಂದಲೇ ಅವರ ಅಣ್ಣನಿಗೆ ಫೋನ್ ಮಾಡಿ `ನಿಮ್ಮ ತಮ್ಮ ನಮ್ಮ ಇನೋವಾ ಕ್ರಿಸ್ಟಾ ಕಾರಿಗೆ ಗುದ್ದಿದ್ದಾನೆ. ಇದಕ್ಕಾಗಿ 2ಲಕ್ಷ ರೂ ಕೊಡಬೇಕು’ ಎಂದು ಬೆದರಿಸಿದರು. ಆಗ, ಜುಬೇದ್ ಅವರು 25 ಸಾವಿರ ರೂಪಾಯಿಗಳನ್ನು ತಮ್ಮನ ಬ್ಯಾಂಕ್ ಖಾತೆಗೆ ಹಾಕಿದ್ದು, ಅದರಲ್ಲಿ 18 ಸಾವಿರ ರೂಪಾಯಿಗಳನ್ನು ದುಷ್ಕರ್ಮಿಗಳು ಫೋನ್ ಫೇ ಮೂಲಕ ತಮ್ಮ ಖಾತೆಗೆ ವರ್ಗಾಯಿಸಿಕೊಂಡರು. ಬೆಳಗ್ಗೆಯವರೆಗೂ ಕಾರಿನಲ್ಲಿ ಅಲ್ಲಿ-ಇಲ್ಲಿ ಸುತ್ತಾಡಿಸಿ ಮಹ್ಮದ್ ಶೇಖ್ ಅವರನ್ನು ಶಿವಮೊಗ್ಗ ಎಂಆರ್‌ಎಸ್ ಕಾಲೋನಿ ಹಿಂಬಾಗದ ರೈಲು ಹಳಿ ಆಚೆಯ ಅಡಿಕೆ ತೋಟದ ಬಳಿ ಬಿಟ್ಟು ಪರಾರಿಯಾದರು.
ಈ ವೇಳೆ ಅವರಲ್ಲಿ ಒಬ್ಬರು `ಜೊಯಿಡಾದಲ್ಲಿ ನಿಂತ ನಮ್ಮ ಕಾರು ಸಹ ಕದ್ದಿರುವುದು. ಅದರ ಬಿಡಿಭಾಗಗಳನ್ನು ನೀನೇ ಮಾರಿಕೋ’ ಎಂದು ಮಹ್ಮದ್ ಶೇಖ್ ಅವರಿಗೆ ಆ ಕಾರಿನ ಚಾವಿ ಕೊಟ್ಟರು. ಈ ಎಲ್ಲಾ ವಿಷಯದ ಬಗ್ಗೆ ಮಹ್ಮದ್ ಶೇಖ್ ಅವರು ಶಿವಮೊಗ್ಗ ಗ್ರಾಮೀಣ ಠಾಣೆಗೆ ದೂರು ನೀಡಿದ್ದು, ಆ ದೂರು ಇದೀಗ ಜೊಯಿಡಾ ಪೊಲೀಸರಿಗೆ ವರ್ಗವಾಗಿದೆ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ದಾರೆ.
Discussion about this post