ಕಳಚೆಯ ಕರಿಮನೆ ಮಾಣಿಗೆ ಕೂಸು ಕೊಡಿಸುವುದಾಗಿ ಲಕ್ಷಾಂತರ ರೂ ಪೀಕಿಸಿದವರ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಸಮಗ್ರ ತನಿಖೆಗೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನವೂ ಆಗ್ರಹಿಸಿದೆ.
ಉತ್ತರ ಭಾರತದ ಕನ್ಯೆಯೊಂದಿಗೆ ಮದುವೆ ಮಾಡಿಸುವುದಾಗಿ ನಂಬಿಸಿ ಯಲ್ಲಾಪುರದ ಕಳಚೆಯ ಕರಿಮನೆಯಲ್ಲಿರುವ ರಾಮಕೃಷ್ಣ ಭಟ್ಟ ಅವರಿಗೆ ಕೆಲವರು ಮೋಸ ಮಾಡಿದ್ದರು. 6 ಲಕ್ಷ ರೂ ಹಣಪಡೆದು ಮದುವೆ ಮಾಡದೇ ವಂಚಿಸಿದ್ದರು. ಸೋಂದಾ ಮಠದಲ್ಲಿ ವಾಸವಾಗಿರುವ ಕಳಚೆ ಸೂತ್ರೆಮನೆ ಲಕ್ಷ್ಮೀನಾರಾಯಣ ಭಟ್ಟ, ಸೋಂದಾ ಬಕ್ಕಳದ ನಾಗರಾಜ ಭಟ್ಟ ಹಾಗೂ ಉತ್ತರ ಪ್ರದೇಶ ರೇಣುಕಾಕೋಟದ ಮಾಲಾ ಜಿ ತ್ರಿಪಾಠಿ ಹಾಗೂ ಮದುವೆಯಾಗಬೇಕಿದ್ದ ಗೋಪಾಲಪುರದ ಪೂಜಾ ಮಿಶ್ರಾ ಮೋಸ ಮಾಡಿರುವ ಬಗ್ಗೆ ರಾಮಕೃಷ್ಣ ಭಟ್ಟರು ಪೊಲೀಸ್ ದೂರು ನೀಡಿದ್ದರು.
ಈ ಆರೋಪಿತರಲ್ಲಿ ಒಬ್ಬರು ಮಠದ ಸಿಬ್ಬಂದಿ ಎನ್ನುವ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದ್ದು, `ಮಠಕ್ಕೂ ಈ ಪ್ರಕರಣಕ್ಕೂ ಸಂಬAಧವಿಲ್ಲ’ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಹೇಳಿದೆ. `ಪೊಲೀಸರು ಈ ಪ್ರಕರಣವನ್ನು ತ್ವರಿತ ಹಾಗೂ ಸಂಪೂರ್ಣವಾಗಿ ತನಿಖೆ ನಡೆಸಬೇಕು. ಸತ್ಯ ಬಹಿರಂಗವಾಗಿ ನಿಜವಾಗಿಯೂ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಇಂಥ ಅಪರಾಧಗಳಲ್ಲಿ ತೊಡಗುವವರಿಗೆ ಭಯ ಮೂಡುವುದರ ಜೊತೆ ಸಮಾಜದಲ್ಲಿ ಪ್ರಾಮಾಣಿಕತೆಯ ಆಚರಣೆ ಬರಬೇಕು’ ಎಂದು ಸ್ವರ್ಣವಲ್ಲೀ ಮಠವೂ ಆಶಿಸಿದೆ.
ಈ ಬಗ್ಗೆ ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಕಾರ್ಯಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಳ್ಳಿ ಅವರು ಪ್ರಕಟಣೆ ಹೊರಡಿಸಿದ್ದಾರೆ.
Discussion about this post