ಗುರು ಹಿರಯರ ಸಮ್ಮುಖದಲ್ಲಿ ದಾಂಡೇಲಿಯ ನಿವೇದಿತಾ ಚವಡಿ ಹಾಗೂ ಬಾಗಲಕೋಟೆಯ ನಿಖಿಲ್ ಜಗಳೂರು ಅವರ ವಿವಾಹ ನಡೆದಿದ್ದು, ಅವರಿಬ್ಬರ ಜಗಳ ಇದೀಗ ಕೋರ್ಟು-ಕಚೇರಿಯ ಮೆಟ್ಟಿಲೇರಿದೆ. ಪತಿಯಿಂದ ಆದ ಹಿಂಸೆ ಹಾಗೂ ಕುಟುಂಬದವರ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ನಿಕ್ಷಿತಾ ಚವಡಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ದಾಂಡೇಲಿಯ ಮಾರುತಿ ನಗರದಲ್ಲಿ ನಿವೇದಿತಾ ಚವಡಿ (26) ಅವರು ವಾಸವಾಗಿದ್ದರು. ಕುಟುಂಬದವರೆಲ್ಲರೂ ಸೇರಿ ಅವರನ್ನು ಬಾಗಲಕೋಟೆಯ ನಿಖಿಲ್ ಜಗಳೂರು ಅವರಿಗೆ ವಿವಾಹ ಮಾಡಿಕೊಟ್ಟಿದ್ದರು. ನಿಖಿಲ್ ಜಗಳೂರು ಅವರಿಗೆ ನಿವೇದಿತಾ ಅವರ ಮೇಲೆ ಅನುಮಾನ ಶುರುವಾಗಿದ್ದು, ಅದೇ ಸಂಶಯದ ಮೇರೆ ಪತ್ನಿಯನ್ನು ಪೀಡಿಸಲು ಶುರು ಮಾಡಿದ್ದರು. ಪತಿಯ ಹಿಂಸೆ ಸಹಿಸಲಾಗದ ನಿವೇದಿತಾ ಅವರು ತವರಿಗೆ ಬಂದು ಆಶ್ರಯಪಡೆದಿದ್ದರು.
ಕಳೆದ ಮಾರ್ಚ ಅವಧಿಯಲ್ಲಿ ಈ ದಂಪತಿ ವಿಷಯವಾಗಿ ಮಾತನಾಡಲು ಬಾಗಲಕೋಟೆಯಿಂದ ಜನ ಬಂದಿದ್ದರು. ನಿಖಿಲ್ ಜಗಳೂರು ಅವರ ಜೊತೆ ಅವರ ಆಪ್ತರಾದ ಪ್ರದೀಪ ಜಗಳೂರು, ಪ್ರಿಯಾ ಜಿಗಳೂರು ಹಾಗೂ ಅಕ್ಕಮಹಾದೇವಿ ಜಿಗಳೂರು ಅವರು ದಾಂಡೇಲಿಗೆ ಆಗಮಿಸಿದ್ದರು. ಮಾತುಕತೆ ನಡುವೆ ಪ್ರದೀಪ ಜಗಳೂರು ಅವರು ಆವೇಶಭರಿತರಾಗಿ ನಿವೇದಿತಾ ಚವಡಿ ಅವರ ಮೈ ಮುಟ್ಟಿದರು. ಅವರ ಕೈ ತಿರುಪಿ ನೋವು ಮಾಡಿದರು.
ಈ ಹೊಡೆದಾಟ ಬಿಡಿಸಲು ಹೋದ ನಿವೇದಿತಾ ಅವರ ತಾಯಿಗೂ ಪ್ರಿಯಾ ಜಿಗಳೂರು ಹಾಗೂ ಅಕ್ಕಮಹಾದೇವಿ ಜಿಗಳೂರು ಅವರು ಹಲ್ಲೆ ಮಾಡಿದರು. ನಿವೇದಿತಾ ಅವರ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿ ನಿಂದಿಸಿದರು. ಅದಾದ ನಂತರವೂ ಅವರೆಲ್ಲರೂ ಪದೇ ಪದೇ ಫೋನ್ ಮಾಡಿ ಬೈಗುಳ ಮುಂದುವರೆಸಿದ್ದು, ಅಗಸ್ಟ 24ರಂದು ನಿಖಿಲ್ ಜಗಳೂರು ಅವರು ನಿವೇದಿತಾ ಅವರ ತಾಯಿಗೆ ಅಶ್ಲೀಲ ಮೆಸೆಜ್ ಮಾಡಿದರು.
ಈ ಎಲ್ಲಾ ಬೆಳವಣಿಗೆ ಹಿನ್ನಲೆ ನಿವೇದಿತಾ ಚವಡಿ ಅವರು ಪೊಲೀಸರ ಮೊರೆ ಹೋದರು. ಪೊಲೀಸರು ಅವರನ್ನು ಸಮಾಧಾನ ಮಾಡಿ, ದೌರ್ಜನ್ಯ ಎಸಗಿದವರ ವಿರುದ್ಧ ದೂರು ದಾಖಲಿಸಿದರು.
Discussion about this post