ಹಬ್ಬ-ಹರಿದಿನಗಳಲ್ಲಿ ಸದ್ದು ಮಾಡುವ ಡಿಜೆ ಅನೇಕ ಜೀವಗಳನ್ನು ಬಲಿಪಡೆದಿದೆ. ಹೀಗಾಗಿ ಜೀವ ರಕ್ಷಿಸುವ ಕಾಯಕದಲ್ಲಿರುವ ಕುಮಟಾದ ವೈದ್ಯರ ತಂಡ ಕಳೆದ 8 ವರ್ಷಗಳಿಂದ ಡಿಜೆ ವಿರುದ್ಧ ಹೋರಾಟ ನಡೆಸುತ್ತಿದೆ. ಅದರ ಪರಿಣಾಮವಾಗಿ ಡಿಜೆ ಸಂಪೂರ್ಣ ನಿಷೇಧ ಸಾಧ್ಯವಾಗದಿದ್ದರೂ ಶಬ್ದ ಮಾಲಿನ್ಯದ ವಿರುದ್ಧ ಜನ ಜಾಗೃತರಾಗುತ್ತಿದ್ದಾರೆ.
`ಭಾರತೀಯ ಸಂಪ್ರದಾಯದoತೆ ಹಬ್ಬ-ಹರಿದಿನಗಳನ್ನು ಶಾಂತಿಯುತವಾಗಿ ನಡೆಸಬೇಕು’ ಎಂಬುದು ಈ ತಂಡದ ಕನಸು. ಹೀಗಾಗಿ ತಮ್ಮ ಸ್ವಂತ ಹಣ ಖರ್ಚು ಮಾಡಿ ಡಿಜೆ ವಿರುದ್ಧ ಈ ವೈದ್ಯರ ತಂಡ ಹೋರಾಟ ನಡೆಸುತ್ತಿದೆ. ಕುಮಟಾದ ವೈದ್ಯ ಡಾ ರವಿರಾಜ ಕಡ್ಲೆ ಅವರು ಈ ಡಿಜೆ ವಿರುದ್ಧ ಹೋರಾಟದ ರೂವಾರಿ. ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿರುವ ಮಹೇಶ ಆಚಾರಿ, ಮಂಜುನಾಥ ಹಳ್ಳೆರ್, ಗಣಪತಿ ಪಟಗಾರ, ಗಣೇಶ ನಾಯ್ಕ ಮೊದಲಾದವರು ಅವರ ಜೊತೆಗಾರರು. ಅವರೆಲ್ಲರ ಪ್ರಯತ್ನದಿಂದ ಡಿಜೆ ಬಳಸುವವರ ವಿರುದ್ಧ ಈಗೀಗ ಪೊಲೀಸ್ ಪ್ರಕರಣ ದಾಖಲಾಗುತ್ತಿದೆ. ಒಂದೆರಡು ಪ್ರಕರಣದಲ್ಲಿ ಡಿಜೆ ಬಳಸಿದವರಿಗೆ ಶಿಕ್ಷೆಯೂ ಆಗಿದೆ.
`1998ರಲ್ಲಿ ದೆಹಲಿಯಲ್ಲಿ ಯುವತಿಯೊಬ್ಬರ ಮೇಲೆ ಅತ್ಯಾಚಾರನಡೆದು ಅವರ ಕೊಲೆಯಾಗಿತ್ತು. ಆ ವೇಳೆ ಯುವತಿ ಸಹಾಯಕ್ಕಾಗಿ ಸಾಕಷ್ಟು ಕೂಗಿದರೂ ಅದು ಯಾರಿಗೂ ಕೇಳಲಿಲ್ಲ. ಅದಕ್ಕೆ ಕಾರಣ ಆ ಪ್ರದೇಶದಲ್ಲಿದ್ದ ಡಿಜೆ ಸದ್ದು. ಇಂಥ ಹಲವು ವಿದ್ಯಮಾನಗಳನ್ನು ಅವಲೋಕಿಸಿದ ಸುಪ್ರೀಂ ಕೋರ್ಟ ವಿಶೇಷ ಅಧಿಕಾರ ಬಳಸಿ ಡಿಜೆ ವಿರುದ್ಧ ಕ್ರಮಕ್ಕೆ ನಿರ್ದೇಸಿತು’ ಎಂದು ಡಾ ರವಿರಾಜ ಕಡ್ಲೆ ಅವರು ಮಾತು ಶುರು ಮಾಡಿದರು. `ಡಿಜೆ ಸದ್ದಿನಿಂದ ಅನೇಕರು ತೊಂದರೆಗೆ ಒಳಗಾಗುತ್ತಾರೆ. ಗರ್ಭದಲ್ಲಿರುವ ಮಕ್ಕಳು ಸಾವನಪ್ಪಿದ ಉದಾಹರಣೆಯಿದೆ. ಅದೆಲ್ಲದರ ಜೊತೆ ಧಾರ್ಮಿಕ, ಆರೋಗ್ಯ, ಕಾನೂನು ದೃಷ್ಠಿಯಿಂದಲೂ ಸಹ ಡಿಜೆ ಸದ್ದು ಅಪಾಯಕಾರಿ’ ಎಂದವರು ವಿವರಿಸಿದರು. `ಪ್ರತಿ ಧಾರ್ಮಿಕ ಉತ್ಸವಗಳಿಗೂ ತಮ್ಮದೇ ಆದ ಹಿನ್ನಲೆ ಇರುತ್ತದೆ. ಮದ್ಯದ ನಶೆ, ಡಿಜೆ ಸದ್ದಿನಲ್ಲಿ ಆ ಉತ್ಸವದ ಮೂಲ ತತ್ವವನ್ನು ಮರೆಯಲಾಗುತ್ತಿದೆ. ಗಣೇಶ ಹಬ್ಬ ಮಾತ್ರವಲ್ಲದೇ ಕೃಷ್ಣಮೂರ್ತಿ ಉತ್ಸವ, ಹನುಮಾನ್ ಮೂರ್ತಿ ಮೆರವಣಿಗೆ, ಶಾರದಾಮೂರ್ತಿ ವಿಸರ್ಜನೆ ಎಂಬ ನೆಪದಲ್ಲಿಯೂ ದೊಡ್ಡದಾಗಿ ಡಿಜೆ ಬಳಸುವ ಕೆಟ್ಟ ಸಂಪ್ರದಾಯ ಬಂದಿದೆ. ಅದನ್ನು ಹೋಗಲಾಡಿಸಿ, ಮೂಲ ತತ್ವದ ಕಡೆ ಮುಖ ಮಾಡುವುದೇ ನಮ್ಮ ಹೋರಾಟದ ಉದ್ದೇಶ ಎಂದು ಈ ತಂಡದ ಮತ್ತೊಬ್ಬ ಸದಸ್ಯ ಡಾ ಮಹೇಶ ಅವರು ಮಾತನಾಡಿದರು.
ಡಿಜೆ ವಿರುದ್ಧ ಹೋರಾಟ ಶುರು ಮಾಡಿದ ವೈದ್ಯರ ತಂಡದವರು ಅನೇಕ ರಾತ್ರಿಗಳನ್ನು ಪೊಲೀಸ್ ಠಾಣೆಯಲ್ಲಿ ಕಳೆದರು. ಡಿಜೆ ಹಾಕಿ ಕುಣಿದು ಕುಪ್ಪಳಿಸುತ್ತಿದ್ದವರ ವಿರುದ್ಧ ದೂರು ನೀಡಿ, ಅವರ ಕೆಂಗಣ್ಣಿಗೆ ಗುರಿಯಾದರು. ಒಂದೇ ತಿಂಗಳ ಅವಧಿಯಲ್ಲಿ 29ಕ್ಕೂ ಅಧಿಕ ದೂರುಗಳನ್ನು ದಾಖಲಿಸಿ ಡಿಜೆ ವಿರುದ್ಧ ದೊಡ್ಡ ಅಭಿಯಾನವನ್ನು ನಡೆಸಿದರು. ಆ ವೇಳೆ ಡಿಜೆ ವಿರೋಧಿ ಬಳಗದವರನ್ನು ಅನೇಕರು ವಿರೋಧವ್ಯಕ್ತಪಡಿಸಿದರು. ಘಟಾನುಘಟಿ ನಾಯಕರು ಡಾ ರವಿರಾಜ ಕಡ್ಲೆ ಅವರ ವಿರುದ್ಧ ಭಾಷಣ ಮಾಡಿದರು. `ಡಿಜೆ ಬೇಕೇ ಬೇಕು’ ಎಂಬ ಆಂದೋಲನಗಳು ನಡೆದವು. ಆದರೆ, ಸುಪ್ರೀಂ ಕೋರ್ಟಿನ ಆದೇಶ ವೈದ್ಯರ ಹೋರಾಟದ ಪರವಾಗಿದ್ದವು. ಇದೆಲ್ಲದರ ಜೊತೆಗೆ ಡಿಜೆ ಪರವಾಗಿ ಆಂದೋಲನ ನಡೆಸಿದವರು ಅದೇ ಡಿಜೆಯಿಂದ ಉಂಟಾದ ಶಬ್ದ ಮಾಲಿನ್ಯದಿಂದ ಸಂತ್ರಸ್ತರಾದರು. ಹೀಗಾಗಿ ಬಹುತೇಕ ಅವರೆಲ್ಲರೂ ಡಿಜೆ ವಿರುದ್ಧ ಆಂದೋಲನಕ್ಕೆ ಕೈ ಜೋಡಿಸದೇ ಇದ್ದರೂ ಈ ವಿಷಯದಲ್ಲಿ ಮೌನವಹಿಸಿದರು. ಇದರ ಪರಿಣಾಮವಾಗಿ ಸದ್ಯ ಕುಮಟಾದ ಸುತ್ತಮುತ್ತಲಿನ ಭಾಗದಲ್ಲಿ ಡಿಜೆ ಸದ್ದು ಕಡಿಮೆಯಾಗಿದೆ. ಅದಾಗಿಯೂ ಡಿಜೆ ಸದ್ದು ಕೇಳಿಸಿದರೆ ಈ ವೈದ್ಯರ ತಂಡದ ಸದಸ್ಯರು ಪೊಲೀಸ್ ಠಾಣೆಯಲ್ಲಿರುತ್ತಾರೆ!
ಈ ನಡುವೆ ಡಾ ರವಿರಾಜ ಕಡ್ಲೆ ಅವರನ್ನು ಭೇಟಿ ಮಾಡಲು ಉತ್ತರ ಭಾರತದ ಗುರುಗಳೊಬ್ಬರು ಆಗಮಿಸಿದ್ದರು. ಆ ಗುರುಗಳನ್ನು ವೈದ್ಯರು ಗೋಕರ್ಣಕ್ಕೆ ಕರೆದೊಯ್ದಿದ್ದು, ಸಂಜೆ ಮರಳುವಾಗ ಗಣೇಶ ಉತ್ಸವದ ನೆಪದಲ್ಲಿ ಕೆಲವರು ಡಿಜೆ ಹಾಕಿ ಕುಣಿಯುವುದನ್ನು ನೋಡಿ ಆ ಗುರುಗಳು ಬೇಸರಿಸಿಕೊಂಡರು. ಧರ್ಮ ರಕ್ಷಣೆಗಾಗಿ ಡಿಜೆ ವಿರುದ್ಧ ಹೋರಾಟ ನಡೆಸುವಂತೆ ಗುರುಗಳಿಂದ ಡಾ ರವಿರಾಜ ಅವರಿಗೆ ಅಪ್ಪಣೆ ಬಂದಿದ್ದು, ಆ ದಿನ ಗುರುಗಳಿಗೆ ಕೊಟ್ಟ ಮಾತಿನಂತೆ ಈಗಲೂ ಅವರು ತಮ್ಮ ಹೋರಾಟ ಮುಂದುವರೆಸಿದ್ದಾರೆ. 2022ರಲ್ಲಿ ಡಿಜೆ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರ ಸಹ ಸೂಚಿಸಿತು. ಆದರೆ, ಪೊಲೀಸ್ ಇಲಾಖೆಯಲ್ಲಿ ಡಿಜೆಯ ಧ್ವನಿ ಅಳೆಯುವ ಮಾನದಂಡವೇ ಇರಲಿಲ್ಲ. ಆಗ, ಈ ವೈದ್ಯರ ತಂಡವೇ ಪೊಲೀಸ್ ಠಾಣೆಯೊಂದಲ್ಲೆ ಡಿಜೆ ಅಳೆಯುವ ಮೀಟರ್’ನ್ನು ದೇಣಿಗೆಯಾಗಿ ನೀಡಿದೆ. ಅದಾದ ನಂತರ ಪೊಲೀಸರು ಕುಮಟಾದಲ್ಲಿ ಪ್ರಕರಣವೊಂದನ್ನು ದಾಖಲಿಸಿದ್ದು, ಡಿಜೆ ಬಳಸಿದವರಿಗೆ ನ್ಯಾಯಾಲಯದಿಂದ ಶಿಕ್ಷೆಯಾಗಿದೆ.
Discussion about this post