ಹುಡುಕಿದ್ದು ಒಂದು ಬೈಕು.. ಸಿಕ್ಕಿದ್ದು ಆರು ಬೈಕು!

ಕಳ್ಳತನವಾದ ಒಂದು ಬೈಕ್ ಹುಡುಕಿ ಹೊರಟ ದಾಂಡೇಲಿ ಪೊಲೀಸರಿಗೆ ಒಟ್ಟು ಆರು ಬೈಕುಗಳು ಸಿಕ್ಕಿದೆ. ಜೊತೆಗೆ ಬೈಕ್ ಕಳ್ಳತನ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಐವರು ಸಿಕ್ಕಿಬಿದ್ದಿದ್ದಾರೆ.

ದಾಂಡೇಲಿಯ ಹಳಿಯಾಳ ರಸ್ತೆಯಲ್ಲಿರುವ ಅಲೈಡ್ ಏರಿಯಾದ ಹುಸನಸಾಬ್ ಹಾಜಿ ಅವರು ತಮ್ಮ ಬೈಕ್ ಕಳ್ಳತನವಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಜಿಲ್ಲೆಯಲ್ಲಿ ಪದೇ ಪದೇ ಬೈಕ್ ಕಳ್ಳತನ ನಡೆಯುತ್ತಿರುವುದನ್ನು ಪೊಲೀಸ್ ಅಧೀಕ್ಷಕ ದೀಪನ ಎಂ ಎನ್ ಅವರು ಗಂಭೀರವಾಗಿ ಪರಿಗಣಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ, ಜಗದೀಶ ಎಂ, ದಾಂಡೇಲಿ ಡಿವೈಎಸ್‌ಪಿ ಶಿವಾನಂದ ಮದರಕಂಡಿ ಅವರ ಜೊತೆಗೂಡಿ ಬೈಕ್ ಕಳ್ಳತನ ಪ್ರಕರಣಗಳ ಬಗ್ಗೆ ಚರ್ಚಿಸಿದರು.

ದಾಂಡೇಲಿಯ ಸಿಪಿಐ ಜಯಪಾಲ ಪಾಟೀಲ, ಪಿಎಸ್‌ಐ ಅಮೀನಸಾಬ ಅತ್ತಾರ್, ಕಿರಣ ಪಾಟೀಲ, ಎಎಸ್‌ಐ ಮಂಜುನಾಥ ದೇಮಟ್ಟಿ ನೇತ್ರತ್ವದಲ್ಲಿ ಹುಸನಸಾಬ್ ಹಾಜಿ ಅವರ ಬೈಕ್ ಹುಡುಕಲು ತಂಡ ರಚಿಸಿದರು. ಪೊಲೀಸ್ ಸಿಬ್ಬಂದಿ ಕೃಷ್ಣಪ್ಪ ಬೆಳವೇರಿ, ಸುನೀಲ ಲುಗಾಡೆ, ಬಸವರಾಜ ತೇಲಸಂಗ, ಇಮ್ರಾನ್ ಕಂಬಾರಗಣವಿ, ಮಹೇಶ ಟಾಕಳೆ ಸೇರಿ ವಿವಿಧ ಕಡೆ ಬೈಕ್ ಹುಡುಕಾಟ ನಡೆಸಿದರು. ಪೊಲೀಸ್ ಸಿಬ್ಬಂದಿ ವೆಂಕಟೇಶ ಮದ್ನೂರು, ಜಯನಗೌಡ ಪಾಟೀಲ, ಚಂದ್ರಶೇಖರ ಪಾಟೀಲ, ಸದ್ದಾಂ ಸಯ್ಯದ್, ರಮೇಶ ನಿಂಬರಗಿ, ಪ್ರಸನ್ನಕುಮಾರ ಎಂ ಜಿ ಸಹ ತಂಡ ರಚಿಸಿಕೊಂಡು ವಿವಿಧ ಆಯಾಮಗಳಲ್ಲಿ ಹುಡುಕಿದರು.

ಕಲಘಟಗಿಯಲ್ಲಿ ಪೇಂಟಿoಗ್ ಕೆಲಸ ಮಾಡಿಕೊಂಡಿದ್ದ ವೆಂಕಟೇಶ ಪವಾರ್ ಅವರ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅದೇ ಊರಿನ ಚಾಲಕ ವಿಲ್ಸನ್ ಗುಂಡಿ, ಹಣ್ಣಿನ ವ್ಯಾಪಾರಿಗಳಾದ ಗೌಸ್ ಮೊಹದ್ದೀನ್, ಮಹಮದ್ ತೌಸೀಪ್, ಹೊಟೇಲ್ ಕೆಲಸ ಮಾಡುವ ದೇವೇಂದ್ರ ಲಮಾಣಿ ಸೇರಿ ಬೈಕ್ ಕಳ್ಳತನ ಮಾಡುತ್ತಿರುವುದನ್ನು ಬಾಯ್ಬಿಟ್ಟರು. ಅವರ ಜೊತೆ ತಾನೂ ಈ ಕಳ್ಳತನದಲ್ಲಿ ಭಾಗಿಯಾಗಿರುವುದಾಗಿ ವೆಂಕಟೇಶ ಪವಾರ್ ಒಪ್ಪಿಕೊಂಡರು.

ಆ ಎಲ್ಲರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಕದ್ದ ಬೈಕುಗಳನ್ನು ಕಾಣಿಸಿದರು. ನಾನಾ ಭಾಗಗಳಲ್ಲಿ ಕದ್ದ ವಿವಿಧ ಬೈಕುಗಳನ್ನು ಪೊಲೀಸರು ಜಪ್ತು ಮಾಡಿದರು. ರಾಯಲ್ ಎನ್‌ಪಿಲ್ಡ್, ಎಚ್ ಎಫ್ ಡಿಲೆಕ್ಸ, ಹಿರೋ ಸ್ಪಾಂಡರ್ ಪ್ಲಸ್ ಬಗೆಯ ಬೈಕುಗಳು ಅಲ್ಲಿದ್ದು, ಆ ಐದು ಬೈಕ್ ಕಳ್ಳರನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು. ನ್ಯಾಯಾಲಯವೂ ಆ ಕಳ್ಳರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.

Leave a Reply

Your email address will not be published. Required fields are marked *