ಪ್ರತಿ ವರ್ಷ 1.50 ಲಕ್ಷ ರೂ ಖರ್ಚು ಮಾಡಿ ಡಿಜೆ ತಂದು ಗಣೇಶ ಉತ್ಸವ ನಡೆಸುತ್ತಿದ್ದ ಯಲ್ಲಾಪುರದ ಮಂಚಿಕೇರಿಯ ಗೋರಸಗದ್ದೆಯ ಗಜಾನನೋತ್ಸವ ಸಮಿತಿಯವರು ಈ ಬಾರಿ ಚಂಡೆ ವಾದನದ ಮೂಲಕ ಉತ್ಸವ ನಡೆಸಿದ್ದಾರೆ. ಅದರ ಮೂಲಕ ದುಂದುವೆಚ್ಚವಾಗುತ್ತಿದ್ದ 1 ಲಕ್ಷ ರೂ ಹಣವನ್ನು ಸಮಿತಿಯವರು ಉಳಿಸಿದ್ದಾರೆ.
ಪ್ರತಿ ವರ್ಷ ಗಣೇಶ ಉತ್ಸವ ಸಮಿತಿಯವರು ಶಿವಮೊಗ್ಗದಿಂದ ಡಿಜೆ ತರಿಸುತ್ತಿದ್ದರು. ಶಿವಮೊಗ್ಗದಲ್ಲಿಯೂ ಡಿಜೆ ಸಿಗದೇ ಇದ್ದರೆ ಹುಬ್ಬಳ್ಳಿಯಿಂದ ತರಿಸುತ್ತಿದ್ದರು. ಡಿಜೆ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಯಲ್ಲಾಪುರ ಪಿಐ ರಮೇಶ ಹಾನಾಪುರ ಅವರು ಗಣೇಶ ಉತ್ಸವ ಸಮಿತಿಯವರಿಗೆ ಮನವರಿಕೆ ಮಾಡಿದ್ದು, ಸಮಿತಿಯವರು ಕಾನೂನು ಪಾಲನೆ ಮಾಡುವ ಭರವಸೆ ನೀಡಿದ್ದರು.
ಈ ವರ್ಷವೂ ಗಜಾನನೋತ್ಸವ ಸಮಿತಿಯವರು ಡಿಜೆ ಬುಕ್ ಮಾಡಿದ್ದರು. ಆದರೆ, ಪೊಲೀಸರ ಮನವೊಲೈಕೆ ಪರಿಣಾಮದಿಂದ ಅವರು ಡಿಜೆ ಬೇಡ ಎಂದು ನಿರ್ಧರಿಸಿದರು. ಬದಲಾಗಿ, ಈ ಬಾರಿ ಮಂಗಳೂರಿನ ಕಲಾವಿದರನ್ನು ಕರೆಯಿಸಿದರು. ಅವರ ಮೂಲಕ ಚಂಡೆ ವಾದನ ನಡೆಸಿ ಅದ್ಧೂರಿ ಉತ್ಸವ ಆಚರಿಸಿದರು. ದೂರದ ಊರಿನಿಂದ ಬಂದ ಕಲಾವಿದರು ಸಹ ಗಜಾನನೋತ್ಸವ ಸಮಿತಿಯವರ ಕಾರ್ಯದ ಬಗ್ಗೆ ಮೆಚ್ಚುಗೆವ್ಯಕ್ತಪಡಿಸಿದರು.
`ಡಿಜೆ ಬಳಕೆ ಮಾಡುವುದರಿಂದ ಅನೇಕರಿಗೆ ಅನೇಕ ಬಗೆಯ ಅನಾನುಕೂಲವಾಗುತ್ತಿದೆ. ಹೀಗಾಗಿ ಸುಪ್ರೀಂ ಕೋರ್ಟ ಸಹ ಡಿಜೆ ಬಳಕೆ ನಿಷೇಧಿಸಿದ್ದು, ಸಾಂಪ್ರದಾಯಿಕ ಗಣೇಶ ಉತ್ಸವಗಳಿಗೆ ಒತ್ತು ಕೊಡಿ’ ಎಂದು ಪೊಲೀಸರು ಸೂಚಿಸಿದರು. ಶಾಂತಿ ಕಾಪಾಡಿದ ಉತ್ಸವ ಸಮಿತಿಯವರ ಜೊತೆ ಪೊಲೀಸರಿಗೂ ಆ ಭಾಗದ ಜನ ಕೃತಜ್ಞತೆ ಸಲ್ಲಿಸಿದರು. `ಡಿಜೆ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಎಲ್ಲರಿಗೂ ಮನವರಿಕೆಯಾಗಿದೆ. ಭವಿಷ್ಯದಲ್ಲಿ ಎಲ್ಲಾ ಉತ್ಸವಗಳನ್ನು ಸಾಂಪ್ರದಾಯಕ ಬದ್ಧವಾಗಿ ಆಚರಿಸುತ್ತೇವೆ’ ಎಂದು ಅಲ್ಲಿನ ಸಂತೋಷ ಮೊಗೇರ್ ತಿಳಿಸಿದರು.
