ಅಪಾಯಕಾರಿ ಆಯುಧ ಹಿಡಿದು ಅಲೆದಾಡುತ್ತಿದ್ದ ಭಾಸ್ಕರ ಸಿದ್ದಿ ಅವರನ್ನು ಯಲ್ಲಾಪುರ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅನುಮಾನಾಸ್ಪದ ಉತ್ತರ ನೀಡಿದ ಹಿನ್ನಲೆ ಭಾಸ್ಕರ ಸಿದ್ಧಿ ವಿರುದ್ಧ ಪಿಎಸ್ಐ ಮಹಾವೀರ ಕಾಂಬಳೆ ಅವರು ಪ್ರಕರಣ ದಾಖಲಿಸಿದ್ದಾರೆ.
ಅಂಕೋಲಾ ತಾಲೂಕಿನ ಹಳವಳ್ಳಿಯ ಭಾಸ್ಕರ ಸಿದ್ದಿ (29) ಅವರು ಅಗಸ್ಟ 28ರಂದು ಯಲ್ಲಾಪುರಕ್ಕೆ ಬಂದಿದ್ದರು. ಆ ದಿನ ನಸುಕಿನ 4 ಗಂಟೆ ಅವಧಿಯಲ್ಲಿ ಅವರು ನೂತನ ನಗರ ಜಡ್ಡಿ ಬಳಿ ಅಲೆದಾಡುತ್ತಿದ್ದರು. ಭಾಸ್ಕರ್ ಸಿದ್ದಿ ಅವರ ಬಳಿ ಅಪಾಯಕಾರಿ ಆಯುಧವಿದದನ್ನು ನೋಡಿ ಜನ ಭಯಪಟ್ಟಿದ್ದರು.
ಭಾಸ್ಕರ ಸಿದ್ದಿ ನೂತನ ನಗರದ ಗರೀಬನ ನವಾಜ್ ಮಸೀದಿ ಬಳಿ ಇರುವುದನ್ನು ತಿಳಿದು ಪೊಲೀಸರು ಅಲ್ಲಿ ದೌಡಾಯಿಸಿದರು. ಪೊಲೀಸರು ಬರುವುದನ್ನು ನೋಡಿ ಭಾಸ್ಕರ್ ಸಿದ್ದಿ ಅವಿತುಕೊಂಡರು. ಅದಾಗಿಯೂ ಯಲ್ಲಾಪುರ ಪಿಎಸ್ಐ ಮಹಾವೀರ ಕಾಂಬಳೆ ಅವರು ಭಾಸ್ಕರ್ ಸಿದ್ದಿ ಅವರನ್ನು ಹುಡುಕಿದರು. ಈ ವೇಳೆ ತಮ್ಮಲ್ಲಿದ್ದ ಆಯುಧವನ್ನು ಭಾಸ್ಕರ ಸಿದ್ದಿ ಮರೆ ಮಾಚಿದರು. ಪೊಲೀಸರು ಅದನ್ನು ಪತ್ತೆ ಮಾಡಿ, ಆ ಬಗ್ಗೆ ಪ್ರಶ್ನಿಸಿದರು.
ಆದರೆ, ಪೊಲೀಸರ ಪ್ರಶ್ನೆಗೆ ಭಾಸ್ಕರ ಸಿದ್ದಿ ಸರಿಯಾಗಿ ಉತ್ತರಿಸಲಿಲ್ಲ. ಅತ್ಯಂತ ಸಂಶಯಾಸ್ಪದ ರೀತಿಯಲ್ಲಿ ಮಾತನಾಡಿದರು. ಯಾವುದೇ ಅಪರಾಧ ಮಾಡಲು ಭಾಸ್ಕರ ಸಿದ್ದಿ ಸಂಚು ರೂಪಿಸಿರುವ ಬಗ್ಗೆ ಅರಿತ ಪೊಲೀಸರು ನ್ಯಾಯಾಲಯಕ್ಕೆ ಈ ಬಗ್ಗೆ ಮಾಹಿತಿ ನೀಡಿದರು. ನ್ಯಾಯಾಲಯದ ಸೂಚನೆ ಪ್ರಕಾರ ಪ್ರಕರಣ ದಾಖಲಿಸಿದರು.
