ಅಪಘಾತದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಶಿರಸಿಯ ಪಕೀರಪ್ಪ ಕರಗಾರ ಅವರು ಕಾಣೆಯಾಗಿದ್ದಾರೆ. ಅವರ ಮಗ ಅರುಣ ಕರಗಾರ ಎಲ್ಲಾ ಕಡೆ ಹುಡುಕಾಟ ನಡೆಸಿದ್ದು, ಸಿಗದ ಕಾರಣ ಪೊಲೀಸರ ನೆರವು ಯಾಚಿಸಿದ್ದಾರೆ.
ಪಕೀರಪ್ಪ ಕರಗಾರ ಅವರು ಶಿರಸಿಯ ಚಿಪಗಿ ಬಳಿಯ ಹಂಚಿನಕೇರಿಯಲ್ಲಿ ವಾಸವಾಗಿದ್ದರು. ಹಮಾಲಿ ಕೆಲಸ ಮಾಡಿ ಅವರು ಜೀವನ ನಡೆಸುತ್ತಿದ್ದರು. 2024ರ ನವೆಂಬರ್ ಅವಧಿಯಲ್ಲಿ ಅವರಿಗೆ ಒಂದು ಅಪಘಾತವಾಯಿತು. ಅದರಿಂದ ಅವರು ಕೆಲಸ ಬಿಟ್ಟು ಮನೆಯಲ್ಲಿಯೇ ಕೂರುವ ಹಾಗಾಯಿತು.
ಅಪಘಾತದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಪಕೀರಪ್ಪ ಕರಗಾರ ಅವರಿಗೆ ಮೊದಲಿನಂತೆ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಮನೆಯಲ್ಲಿಯೇ ಆರೈಕೆಯಲ್ಲಿದ್ದ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು. ಹೀಗಿರುವಾಗ ಅಗಸ್ಟ 24ರಂದು ಅವರು ಏಕಾಏಕಿ ಮನೆಯಿಂದ ನಾಪತ್ತೆಯಾದರು. ಎಲ್ಲಿ ಹುಡುಕಿದರೂ ಅವರ ಸುಳಿವು ಸಿಗಲಿಲ್ಲ.
ಹೀಗಾಗಿ ಪಕೀರಪ್ಪ ಕರಗಾರ ಅವರ ಪತ್ತೆಗಾಗಿ ಅವರ ಮಗ ಅರುಣ ಕರಗಾರ ಪೊಲೀಸರ ಮೊರೆ ಹೋದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ಹುಡುಕಾಟ ಶುರು ಮಾಡಿದ್ದಾರೆ.
