ನೆರೆ ಪ್ರವಾಹದಿಂದ ಕಾಳಜಿ ಕೇಂದ್ರದಲ್ಲಿ ಆಶ್ರಯಪಡೆದ ಸಂತ್ರಸ್ತರಿಗೆ ಸರ್ಕಾರ ಸಾತ್ವಿಕ ಆಹಾರ ಉಣಬಡಿಸಿದೆ. ಶಾಲೆಯ ಬಿಸಿಯೂಟ ಸಿಬ್ಬಂದಿ ಆಹಾರ ತಯಾರಿಸಿ ಕೊಟ್ಟಿದ್ದಾರೆ.
ಹೊನ್ನಾವರ ತಹಶೀಲ್ದಾರ್ ಪ್ರವೀಣ ಕರಾಂಡೆ ಅವರು ಶುಕ್ರವಾರ ರಾತ್ರಿ ಕಾಳಜಿ ಕೇಂದ್ರದಲ್ಲಿ ಊಟ ಸವಿದು ಆಹಾರ ಗುಣಮಟ್ಟ ಪರಿಶೀಲನೆ ನಡೆಸಿದ್ದಾರೆ.
ಲಿಂಗನಮಕ್ಕಿ ಹಾಗೂ ಗೇರುಸೊಪ್ಪಾ ಅಣೆಕಟ್ಟಿನಿಂದ ನಿರಂತರವಾಗಿ ನೀರು ಹೊರಬಿಡಲಾಗುತ್ತಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ವಿವಿಧ ಭಾಗದಲ್ಲಿ ಪ್ರವಾಹ ಸೃಷ್ಠಿಯಾಗಿದೆ. ಜಿಲ್ಲಾಡಳಿತ ಹೊನ್ನಾವರದಲ್ಲಿ 15 ಕಡೆ ಜಿಲ್ಲಾಡಳಿತ ಕಾಳಜಿ ಕೇಂದ್ರ ತೆರೆದಿದೆ. ಶುಕ್ರವಾರ ಸಂಜೆ ವೇಳೆ ಕಾಳಜಿ ಕೇಂದ್ರದಲ್ಲಿ 369 ಜನ ಆಶ್ರಯಪಡೆದಿದ್ದು, ರಾತ್ರಿ ಅವರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ.
ತಹಶೀಲ್ದಾರ್ ಸೇರಿ ವಿವಿಧ ಹಂತದ ಅಧಿಕಾರಿಗಳು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಗ್ರಾಮ ಪಂಚಾಯತ ಸದಸ್ಯರು ಸ್ಥಳದಲ್ಲಿದ್ದಾರೆ. ಜೊತೆಗೆ ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿ ಸಹ ಅಲ್ಲಿ ಸಂತ್ರಸ್ತರನ್ನು ನೋಡಿಕೊಳ್ಳುತ್ತಿದ್ದಾರೆ. ಕಾಳಜಿ ಕೇಂದ್ರದಲ್ಲಿನ ಸೊಳ್ಳೆ ಕಾಟ ತಡೆಗೆ ಕಾಯಿಲ್ ಉರಿಸಲಾಗಿದೆ. ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆಯಿದ್ದು, ಸಂತ್ರಸ್ತರಿಗೆ ಕುಡಿಯುವ ನೀರು ಪೂರೈಸಲಾಗಿದೆ. ಹೆರೆಅಂಗಡಿಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಹೊನ್ನಾವರ ತಹಶೀಲ್ದಾರ್ ಪ್ರವೀಣ ಕರಾಂಡೆ ಅಲ್ಲಿದ್ದವರ ಆರೋಗ್ಯ ವಿಚಾರಿಸಿದರು. ಜೊತೆಗೆ ಸಂತ್ರಸ್ತರ ಜೊತೆಯೇ ಊಟ ಮಾಡಿದರು. `ಸಂತ್ರಸ್ತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಿ’ ಎಂದು ಅಲ್ಲಿದ್ದ ಸಿಬ್ಬಂದಿಗೆ ಸೂಚನೆ ನೀಡಿದರು.
ಮಳೆ ವಿವರ
ಕಳೆದ 24 ಗಂಟೆಗಳಲ್ಲಿ ಅಂಕೋಲಾದಲ್ಲಿ 31.3 ಮಿಮೀ, ಭಟ್ಕಳದಲ್ಲಿ 146.9, ಹಳಿಯಾಳ 1.8, ಹೊನ್ನಾವರ 113.4, ಕಾರವಾರ 25.2, ಕುಮಟಾ 80.2, ಮುಂಡಗೋಡ 4.4, ಸಿದ್ದಾಪುರ 59.4, ಶಿರಸಿ 32.1, ಸೂಪಾ 10.9, ಯಲ್ಲಾಪುರ 8.8, ದಾಂಡೇಲಿಯಲ್ಲಿ 2.7, ಮಿಲಿ ಮೀಟರ್ ಮಳೆ ಸುರಿದಿದೆ. 1 ಮನೆಗೆ ಸಂಪೂರ್ಣ ಹಾನಿಯಾಗಿದೆ.
