ಭಟ್ಕಳದ ಸವಿತಾ ನಾಯ್ಕ ಅವರು ತಮ್ಮ 32ನೇ ವಯಸ್ಸಿನಲ್ಲಿ ಸಾವಿನ ಹಾದಿ ತುಳಿದಿದ್ದಾರೆ. ಪತಿ ಸೋಮಯ್ಯ ನಾಯ್ಕ ಅವರ ಸಂಶಯದ ಸ್ವಭಾವ, ಕಿರುಕುಳ ಸಹಿಸಲಾಗದೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಭಟ್ಕಳ ಮುಂಡಳ್ಳಿಯ ನೀರಗದ್ದೆಯಲ್ಲಿ ಸವಿತಾ ನಾಯ್ಕ ಅವರು ವಾಸವಾಗಿದ್ದರು. ಅದೇ ಊರಿನ ಸೋಮಯ್ಯ ನಾಯ್ಕ ಅವರ ಜೊತೆ ಸವಿತಾ ನಾಯ್ಕ ಅವರ ವಿವಾಹವಾಗಿತ್ತು. ಸೋಮಯ್ಯ ನಾಯ್ಕ ಅವರು ಸೆಂಟ್ರಿoಗ್ ಕೆಲಸ ಮಾಡಿಕೊಂಡಿದ್ದು, ಸವಿತಾ ನಾಯ್ಕ ಅವರು ಸಹ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಇಬ್ಬರ ದುಡಿಮೆಯಿಂದ ಅವರ ಸಂಸಾರ ಸಾಗಿತ್ತು.
ಆದರೆ, ಸೋಮಯ್ಯ ನಾಯ್ಕ ಅವರ ತಲೆಯೊಳಗೆ ಪತ್ನಿ ಬಗ್ಗೆ ಸಂಶಯ ಮೂಡಿತು. ಅದೇ ಅನುಮಾನದ ಮೇರೆಗೆ ಸವಿತಾ ನಾಯ್ಕ ಅವರನ್ನು ಪೀಡಿಸಲು ಶುರು ಮಾಡಿದ್ದರು. ಮದುವೆ ಆದ ದಿನದಿಂದಲೂ ಕಾಡುತ್ತಿದ್ದ ಸಂಶಯ ಕ್ರಮೇಣ ಹೆಚ್ಚಾಗಿದ್ದು, ನಿತ್ಯವೂ ಪತ್ನಿಗೆ ಕಿರುಕುಳ ನೀಡುವುದನ್ನು ರೂಢಿಸಿಕೊಂಡರು. ಸವಿತಾ ನಾಯ್ಕ ಅವರು ಮಾನಸಿಕ ಹಿಂಸೆಯ ಜೊತೆ ದೈಹಿಕವಾಗಿಯೂ ನೋವು ಅನುಭವಿಸಿದರು.
ಇಷ್ಟು ದಿನಗಳ ಕಾಲ ಪತಿಯ ಕ್ರೌರ್ಯ ಸಹಿಸಿಕೊಂಡಿದ್ದ ಸವಿತಾ ನಾಯ್ಕ ಅವರಿಗೆ ಇನ್ಮುಂದೆ ಅದನ್ನು ಸಹಿಸಿಕೊಳ್ಳುವ ಸಹನೆ ಇರಲಿಲ್ಲ. ಆ ಕಿರುಕುಳ ಅನುಭವಿಸುವುದಕ್ಕಿಂತಲೂ ಸಾವೇ ಉತ್ತಮ ಎಂದು ನಿರ್ಧರಿಸಿ ಅವರು ದುಡುಕಿನ ನಿರ್ಧಾರ ಮಾಡಿದರು. ಅಗಸ್ಟ 28ರ ರಾತ್ರಿ 9 ಗಂಟೆ ನಂತರ ಅವರು ಮನೆಯಲ್ಲಿದ್ದ ದುಪ್ಪಟ್ಟವನ್ನು ಉರುಳು ಮಾಡಿಕೊಂಡು ನೇಣಿಗೆ ಶರಣಾದರು. ತಂಗಿ ಸಾವಿನ ಬಗ್ಗೆ ಅರಿತ ಮೋಹನ ನಾಯ್ಕ ಅವರು ಅಲ್ಲಿಗೆ ಧಾವಿಸಿ ಬಂದರು. ಸವಿತಾ ನಾಯ್ಕ ಅವರು ಅನುಭವಿಸಿದ ಯಾತನೆ ವಿರುದ್ಧ ಪೊಲೀಸರಿಗೆ ವಿವರಿಸಿದರು. ಸೋಮಯ್ಯ ನಾಯ್ಕ ಅವರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.
