ಉತ್ತರ ಕನ್ನಡ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ನಿರಂತರವಾಗಿ ಪ್ರವಾಸದಲ್ಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಅವರು ಗಣೇಶನ ದರ್ಶನ ಮಾಡುತ್ತಿದ್ದಾರೆ. ಅದರೊಂದಿಗೆ ಕಾನೂನು ಸುವ್ಯವಸ್ಥೆಯ ಬಗ್ಗೆಯೂ ಅವರು ನಿಗಾವಹಿಸಿದ್ದಾರೆ.
ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಜೊತೆಗೆ ವಿವಿಧ ಸಮುದಾಯದ ಪ್ರಮುಖರನ್ನು ಕರೆದು ಮಾತನಾಡಿಸಿದ್ದಾರೆ. ಡಿಜೆ ಬಳಕೆ ಮಾಡದಂತೆ ಎಲ್ಲಡೆ ಅರಿವು ಮೂಡಿಸಿದ್ದಾರೆ. ಗಣೇಶ ಉತ್ಸವ ಸಮಿತಿಯವರಿಗೆ ಸಿಗಬೇಕಾದ ವಿವಿಧ ಅನುಮತಿಗಳನ್ನು ಶೀಘ್ರದಲ್ಲಿ ದೊರೆಯುವಂತೆ ಮಾಡಿದ್ದಾರೆ. ಪರಿಸರ ಸ್ನೇಹಿ ಗಣೇಶ ಉತ್ಸವ ಆಯೋಜಿಸುವ ಬಗ್ಗೆ ಮೊದಲಿನಿಂದಲೂ ಪ್ರಕಟಣೆ ನೀಡುತ್ತ ಬಂದಿರುವ ಅವರು ಇದೀಗ ಗಣೇಶ ಉತ್ಸವ ಸಮಿತಿಯವರ ಪೆಂಡಾಲಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ತಲೆತಲಾಂತರಗಳಿ0ದ ಗಣೇಶ ಉತ್ಸವ ಸಮಿತಿಯವರು ಗಣಪತಿ ಕೂರಿಸುತ್ತ ಬಂದಿದ್ದು, ಪೊಲೀಸ್ ಅಧೀಕ್ಷಕರು ಈ ಉತ್ಸವದಲ್ಲಿ ಭಾಗಿಯಾದ ಉದಾಹರಣೆಗಳಿಲ್ಲ. ಹೀಗಾಗಿ ಗಣೇಶನ ಮಂಟಪಕ್ಕೆ ಬಂದ ದೀಪನ್ ಎಂ ಎನ್ ಅವರನ್ನು ಅಲ್ಲಿನ ಯುವಕರು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ತಾವು ಪ್ರತಿಷ್ಠಾಪಿಸಿದ ಗಣೇಶನನ್ನು ಕಾಣಿಸಿ ಅದರ ಸೌಂದರ್ಯ ವಿವರಿಸುತ್ತಿದ್ದಾರೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ಸಹ ಪೊಲೀಸರು ಗಣೇಶನನ್ನು ಕೂರಿಸಿದ್ದು, ಪೊಲೀಸ್ ಅಧೀಕ್ಷಕರು ಅದನ್ನು ಗಮನಿಸಿದ್ದಾರೆ. ಶಾಂತ ರೀತಿಯಿಂದ ಉತ್ಸವ ಆಚರಿಸಿದ ಅಧೀನ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.
ಇದರೊOದಿಗೆ ಯಲ್ಲಾಪುರ, ಸಿದ್ದಾಪುರ, ಬನವಾಸಿ, ಮುಂಡಗೋಡು, ಕಾರವಾರ, ಕುಮಟಾ ಸೇರಿ ವಿವಿಧ ಭಾಗದ ಗಣೇಶ ಮಂಟಪಗಳಿಗೆ ಸ್ವತಃ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ತೆರಳಿ ದೇವರ ದರ್ಶನ ಮಾಡಿದ್ದಾರೆ. ಗಣೇಶ ಉತ್ಸವದ ಹೆಸರಿನಲ್ಲಿ ಲಕ್ಕಿ ಡ್ರಾ, ಲಾಟರಿ ಮಾರಾಟ ಮಾಡದಂತೆ ಪೊಲೀಸರು ಈಗಾಗಲೇ ಎಲ್ಲಡೆ ಸೂಚನೆ ನೀಡಿದ್ದಾರೆ. ಅದಾಗಿಯೂ ಅಂಥ ಅನಧಿಕೃತ ಚಟುವಟಿಕೆ ಕಾಣಿಸಿದಲ್ಲಿ ಮುಲಾಜಿಲ್ಲದೇ ಪ್ರಕರಣ ದಾಖಲಿಸುತ್ತಿದ್ದಾರೆ.
