ಲಿಂಗನಮಕ್ಕಿ ಹಾಗೂ ಗೇರುಸೊಪ್ಪಾ ಅಣೆಕಟ್ಟಿನಿಂದ ನೀರು ಹೊರಬಿಟ್ಟ ಪರಿಣಾಮ ಹೊನ್ನಾವರದ ಅನೇಕ ಭಾಗದಲ್ಲಿ ನೆರೆ ಪ್ರವಾಹ ಸೃಷ್ಠಿಯಾಗಿದೆ. ಪ್ರವಾಹದಿಂದ ದಿಕ್ಕೆಟ್ಟ ಸಂತ್ರಸ್ತರನ್ನು ಉತ್ತರ ಕನ್ನಡ ಜಿಲ್ಲಾಡಳಿತ ಕಾಳಜಿ ಕೇಂದ್ರಕ್ಕೆ ರವಾನಿಸಿದೆ.
ಹೊನ್ನಾವರ ತಾಲೂಕಿನ . ಸರಳಗಿ, ಹೆರೆಅಂಗಡಿ, ಮೇಲಿನ ಇಡಗುಂಜಿ, ಜಲವಳ್ಳಿ, ಗುಂಡಬಾಳ, ಚಿಕ್ಕನಕೊಡ, ಹೊಸ್ಕೇರಿ, ಖರ್ವಾ, ಬೆರೊಳ್ಳಿ, ಹಡಿನಬೈಲ್ ಹಾಗೂ ಮುಗ್ವಾ ಭಾಗದ ಜನ ಸಂತ್ರಸ್ತರಾಗಿದ್ದಾರೆ. ಹೀಗಾಗಿ ವಿವಿಧ ಕಡೆ ಶುಕ್ರವಾರ 15 ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. ಸರ್ಕಾರಿ ಶಾಲೆಗಳನ್ನು ಕಾಳಜಿ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಅಲ್ಲಿ ಒಟ್ಟು 129 ಕುಟುಂಬದ 369 ಜನರಿಗೆ ಆಶ್ರಯ ನೀಡಲಾಗಿದೆ. 158 ಪುರುಷರು, 169 ಮಹಿಳೆಯರ ಜೊತೆ 42ಮಕ್ಕಳು ಕಾಳಜಿ ಕೇಂದ್ರದಲ್ಲಿ ಕಾಲ ಕಳೆಯುತ್ತಿದ್ದಾರೆ.
ಮಾವಿನಹೊಳೆ ಕಾಳಜಿ ಕೇಂದ್ರದಲ್ಲಿ ಆರು ಕುಟುಂಬದ 23 ಸದಸ್ಯರಿಗೆ ಆಶ್ರಯ ನೀಡಲಾಗಿದೆ. ಆಳಂಕಿ ಕೇಂದ್ರದಲ್ಲಿ 13 ಕುಟುಂಬದ 51 ಜನ ಆಶ್ರಯಪಡೆದಿದ್ದಾರೆ. ಸರಳಗಿಯಲ್ಲಿ 11 ಕುಟುಂಬದ 38 ಜನ, ಮೇಲಿನ ಇಡಗುಂಜಿ ಶಾಲೆಯಲ್ಲಿ 2 ಕುಟುಂಬದ 5 ಜನ, ಪಡ್ಕುಳಿಯಲ್ಲಿ 3 ಕುಟುಂಬದ 7 ಜನ, ಗುಡ್ಡೆಬಾಳದಲ್ಲಿ 4 ಕುಟುಂಬದ 12 ಜನರಿಗೆ ಜಿಲ್ಲಾಡಳಿತ ಆಶ್ರಯ ನೀಡಿದೆ. ಹೆಬ್ಬಳ್ಳಿ ಅಂಗನವಾಡಿ ಕೇಂದ್ರವನ್ನು ಕಾಳಜಿ ಕೇಂದ್ರವನ್ನಾಗಿ ಮಾಡಲಾಗಿದ್ದು, ಇಲ್ಲಿ 4 ಕುಟುಂಬದ 10 ಜನ ಆಶ್ರಯಪಡೆದಿದ್ದಾರೆ.
ಗುಂಡಿಬೈಲಿನ ಎರಡು ಕಾಳಜಿ ಕೇಂದ್ರದಲ್ಲಿ 9 ಕುಟುಂಬದ 18 ಜನರನ್ನು ಇರಿಸಲಾಗಿದೆ. ಗುಂಡಬಾಳದಲ್ಲಿ 4 ಕುಟುಂಬದ 10 ಜನ, ಹೈಗುಂದದಲ್ಲಿ 19 ಕುಟುಂಬದ 83 ಜನ ಆಶ್ರಯಪಡೆದಿದ್ದಾರೆ. ಮರ್ನಕುಳಿಯಲ್ಲಿ 3 ಕುಟುಂಬದ 9 ಜನ, ಬೆರೊಳ್ಳಿಯಲ್ಲಿ 18 ಕುಟುಂಬದ 21 ಜನ, ಹಡಿನಬೈಲಿನಲ್ಲಿ 15 ಕುಟುಂಬದ 35 ಜನ ಹಾಗೂ ಭಾಸ್ಕೇರಿಯಲ್ಲಿ 18 ಕುಟುಂಬದ 46 ಜನರಿಗೆ ಆಶ್ರಯ ನೀಡಲಾಗಿದೆ.
ಭಾರೀ ಮಳೆ ಪರಿಣಾಮ ಜಿಲ್ಲೆಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, `ಜನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಿರಬೇಕು. ಅಪಾಯಕಾರಿ ಸ್ಥಳಗಳಿಗೆ ತೆರಳಬಾರದು’ ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
