ಮೊನ್ನೆ ಯಲ್ಲಾಪುರ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದ ಭಾಸ್ಕರ ಸಿದ್ದಿ ಇಲ್ಲಿಂದ ಬಿಡಿಸಿಕೊಂಡು ಹೋದ ಮರುದಿನವೇ ಅಂಕೋಲಾದಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ.
ಭಾಸ್ಕರ ಸಿದ್ದಿ ಅವರಿಗೆ ಕಳ್ಳತನವೇ ದೊಡ್ಡ ಕಸುಬು. ಕಳ್ಳತನ ಮಾಡಿ ತಪ್ಪಿಸಿಕೊಳ್ಳುವುದು ಭಾಸ್ಕರ ಸಿದ್ದಿ ಅವರ ಖಯಾಲಿ. ಅಂಕೋಲಾ ತಾಲೂಕಿನ ಹಳವಳ್ಳಿಯ ಬಾಳೆಗದ್ದೆಯ ಭಾಸ್ಕರ ಸಿದ್ದಿ (29) ಈ ಮೊದಲು ಸಹ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಯಲ್ಲಾಪುರ ಹಾಗೂ ಅಂಕೋಲಾ ತಾಲೂಕು ಗುರಿಯಾಗಿರಿಸಿಕೊಂಡು ಪದೇ ಪದೇ ಕಳ್ಳತನ ಮಾಡುತ್ತಿದ್ದರು. ಕೆಲ ಬಾರಿ ಪೊಲೀಸರ ಬಳಿಯೂ ಸಿಕ್ಕಿ ಬಿದ್ದಿದ್ದರು. ಅದು-ಇದು ಎಂದಿಲ್ಲ. ಏನೂ ಸಿಕ್ಕರೂ ಅದನ್ನು ಕದಿಯುವುದು.. ಜಾಮೀನಿನ ಮೇಲೆ ಹೊರಬರುವುದು ಭಾಸ್ಕರ್ ಸಿದ್ದಿ ಅವರಿಗೆ ಹೊಸ ವಿಷಯವೇ ಅಲ್ಲ!
ಗುರುವಾರ ನಸುಕಿನಲ್ಲಿ ಯಲ್ಲಾಪುರದಲ್ಲಿ ಭಾಸ್ಕರ ಸಿದ್ದಿ ಅಪಾಯಕಾರಿ ಆಯುಧ ಹಿಡಿದು ಅಲೆದಾಡುತ್ತಿದ್ದರು. ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಭಾಸ್ಕರ ಸಿದ್ದಿ ಅವರನ್ನು ಯಲ್ಲಾಪುರ ಪಿಎಸ್ಐ ಮಹಾವೀರ ಕಾಂಬಳೆ ಅವರು ವಿಚಾರಣೆಗೆ ಒಳಪಡಿಸಿದ್ದರು. ಸರಿಯಾದ ಉತ್ತರ ನೀಡಿದ ಕಾರಣ ಭಾಸ್ಕರ ಸಿದ್ದಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಜೊತೆಗೆ ನೂತನ ನಗರ ಜಡ್ಡಿ ಬಳಿ ನಡೆಯುವ ಅಪರಾಧವನ್ನು ಪೊಲೀಸರು ಮುನ್ನಚ್ಚರಿಕಾ ಕ್ರಮದಿಂದ ತಡೆದಿದ್ದರು.
ಅದಾದ ನಂತರ ಭಾಸ್ಕರ ಸಿದ್ದಿ ಅವರನ್ನು ಮಹಾವೀರ ಕಾಂಬಳೆ ಅವರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಹಿಂದೆ ಭಾಸ್ಕರ ಸಿದ್ದಿ ಮಾಡಿದ ವಿವಿಧ ಅಪರಾಧ ಪ್ರಕರಣಗಳ ಬಗ್ಗೆಯೂ ವರದಿ ಸಲ್ಲಿಸಿದ್ದರು. ಅದಾಗಿಯೂ, ನ್ಯಾಯಾಲಯದಿಂದ ಜಾಮೀನುಪಡೆದು ಹೊರಬಂದ ಭಾಸ್ಕರ ಸಿದ್ದಿ ಶುಕ್ರವಾರ ಅಂಕೋಲಾ ಕಡೆ ಹೊರಟಿದ್ದರು. ದಾರಿ ಮದ್ಯೆಯೇ ಮತ್ತೊಂದು ಮನೆಗೆ ಕನ್ನ ಹಾಕಿದರು.
ಶುಕ್ರವಾರ ಬೆಳಗ್ಗೆ 9 ಗಂಟೆ ಆಸುಪಾಸಿನಲ್ಲಿ ಭಾಸ್ಕರ ಸಿದ್ದಿ ರಾಮನಗುಳಿಯ ವ್ಯಾಪಾರಿ ವಿಲ್ಸನ್ ಡಿಕೋಸ್ತಾ ಅವರ ಮನೆಗೆ ನುಗ್ಗಿದರು. ಡಿಕೋಸ್ತಾ ಅವರ ಬೆಡ್ ರೂಮಿಗೆ ಪ್ರವೇಶಿಸಿ ಅಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿದರು. ಅದಾದ ನಂತರ ಕಪಾಟಿನಲ್ಲಿದ್ದ 10 ಸಾವಿರ ರೂ ಹಣ ಕದ್ದು ಪರಾರಿಯಾದರು. ಇಷ್ಟಕ್ಕೆ ಸುಮ್ಮನಾಗದ ಭಾಸ್ಕರ ಸಿದ್ದಿ ಅದೇ ದಿನ ರಾತ್ರಿ 9.30ಕ್ಕೆ ಮತ್ತೆ ವಿಲ್ಸನ್ ಡಿಕೋಸ್ತಾ ಅವರ ಮನೆ ಬಳಿ ಬಂದಿದ್ದು, ಮನೆಯ ಹಂಚು ತೆಗೆದು ಒಳಗೆ ನುಗ್ಗಿದರು. ಆದರೆ, ಈ ವೇಳೆ ಭಾಸ್ಕರ ಸಿದ್ದಿ ಬಳಿ ಮತ್ತೊಮ್ಮೆ ಕಳ್ಳತನ ಮಾಡಲಾಗಲಿಲ್ಲ. ಜನ ಬರುವುದನ್ನು ನೋಡಿ ಅವರು ಅಲ್ಲಿಂದ ಪರಾರಿಯಾದರು.
ಸದ್ಯ ವಿಲ್ಸನ್ ಡಿಕೋಸ್ತಾ ಅವರು ಅಂಕೋಲಾ ಪೊಲೀಸ್ ಠಾಣೆಗೆ ಹೋಗಿ ಭಾಸ್ಕರ್ ಸಿದ್ದಿ ಮಾಡಿದ ಅವಾಂತರಗಳ ಬಗ್ಗೆ ವಿವರಿಸಿದ್ದಾರೆ. ಭಾಸ್ಕರ್ ಸಿದ್ಧಿ ಅವರನ್ನು ಬಂಧಿಸಿ ತಮಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಂಕೋಲಾ ಪೊಲೀಸರು ಭಾಸ್ಕರ ಸಿದ್ದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳನಿಗಾಗಿ ಶೋಧ ಕಾರ್ಯ ಶುರು ಮಾಡಿದ್ದಾರೆ.
