ಹಳಿಯಾಳದಲ್ಲಿ ಕಳ್ಳರ ಕೈ ಚಳಕ ಮುಂದುವರೆದಿದೆ. ವೃತ್ತ ಶಿಕ್ಷಕ ವೆಂಕಟೇಶ ಶೇಟ್ ಹಾಗೂ ಖಾಸಗಿ ಕಂಪನಿ ಉದ್ಯೋಗಿ ಉಸ್ಮಾನಗನಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.
ಕುಮಟಾ ಧಾರೇಶ್ವರದ ವೆಂಕಟೇಶ ಶೇಟ್ ಅವರು ಹಳಿಯಾಳದಲ್ಲಿ ಮನೆ ಮಾಡಿದ್ದರು. ಹಳಿಯಾಳದ ಆನೆಗುಂದಿ ಪ್ಲಾಟಿನಲ್ಲಿ ವಾಸವಾಗಿದ್ದ ಅವರು ಅಗಸ್ಟ 25ರಿಂದ ಮನೆಯಲ್ಲಿರಲಿಲ್ಲ. ಅಗಸ್ಟ 29ರಂದು ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ವೆಂಕಟೇಶ ಶೇಟ್ ಅವರ ಮನೆಯ ಬೀಗ ಮುರಿದ ಕಳ್ಳರು ಕೋಣೆಯ ಕಪಾಟಿನಲ್ಲಿರಿಸಿದ್ದ ಬೆಳ್ಳಿ ಆಭರಣ, ವಾಚ್, ಫೋನ್ ಕದ್ದಿದ್ದಾರೆ. ಒಟ್ಟು 33 ಸಾವಿರ ರೂ ಮೌಲ್ಯದ ಸ್ವತ್ತು ಕಳ್ಳರ ಪಾಲಾಗಿದೆ.
ಹಳಿಯಾಳದ ಸದಾಶಿವನಗರದಲ್ಲಿ ಮನೆ ಮಾಡಿಕೊಂಡಿರುವ ಉಸ್ಮಾನಗನಿ ಅವರ ಮನೆಯಲ್ಲಿಯೂ ಇದೇ ಬಗೆಯಲ್ಲಿ ಕಳ್ಳತನ ನಡೆದಿದೆ. ಅವರಿಗೆ ಸಹ ಅಗಸ್ಟ 29ರಂದು ಕಳ್ಳತನ ನಡೆದಿರುವುದು ಅರಿವಿಗೆ ಬಂದಿದೆ. ಕೋಣೆಯಲ್ಲಿದ್ದ ಬಟ್ಟೆಗಳನ್ನು ಚಲ್ಲಾಪಿಲ್ಲಿಯಾಗಿಸಿದ ಕಳ್ಳರು ಮನೆಯಲ್ಲಿದ್ದ ಮಂಗಳಸೂತ್ರ, ಕೈಗಡ, ನೆಕ್ಲೇಸ್ ಸೇರಿ 81 ಸಾವಿರ ರೂ ಮೌಲ್ಯದ ಸ್ವತ್ತುಗಳನ್ನು ದೋಚಿದ್ದಾರೆ.
ಈ ಇಬ್ಬರು ಕಳ್ಳರ ಪತ್ತೆಗೆ ಪೊಲೀಸರ ಮೊರೆ ಹೋಗಿದ್ದಾರೆ. ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರ ಹುಡುಕಾಟ ನಡೆಸಿದ್ದಾರೆ. ಮೂರು ದಿನದ ಹಿಂದೆಯೂ ಎರಡು ಮನೆಗಳಲ್ಲಿ ಕಳ್ಳತನ ನಡೆದಿರುವುದು ವರದಿಯಾಗಿತ್ತು.
`ಮನೆ ಬಿಟ್ಟು ಹೊರಗೆ ಹೋಗುವಾಗ ಪೊಲೀಸರಿಗೆ ತಿಳಿಸಿ. ನಿಮ್ಮ ಸ್ವತ್ತುಗಳನ್ನು ರಕ್ಷಿಸಿ’
