ಭಟ್ಕಳದ ಶಿರಾಲಿ ಬಳಿಯ ಗುಡಿಹಿತ್ಲು ಗ್ರಾಮದಲ್ಲಿರುವ ಕಂಚಿನ ದುರ್ಗಾಪರಮೇಶ್ವರಿ ದೇವಾಲಯಕ್ಕೆ ನುಗ್ಗಿ ದಾಂದಲೆ ನಡೆಸಿದ ಇಬ್ಬರು ಸಿಕ್ಕಿಬಿದ್ದಿದ್ದಾರೆ. ದೇವಾಲಯದ ಬಾಗಿಲು ಮುರಿದು, ಹುಂಡಿಯನ್ನು ಒಡೆದು ಅಲ್ಲಿದ್ದ ಹಣ ಕದ್ದವರು ಇದೀಗ ಜೈಲು ಸೇರಿದ್ದಾರೆ.
ಅಗಸ್ಟ 29ರಂದು ಭಟ್ಕಳ ಗುಡಿಹತ್ಲ ಶಿರಾಲಿಯ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿತ್ತು. ದೇವಾಲಯದ ಹುಂಡಿಯಲ್ಲಿದ್ದ ಅಂದಾಜು 25 ಸಾವಿರ ರೂ ಹಣ ಕಾಣೆಯಾದ ಬಗ್ಗೆ ಅದೇ ಊರಿನ ನಾಗೇಶ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಐ ಮಂಜುನಾಥ ಲಿಂಗಾರೆಡ್ಡಿ ಅವರು ಕಾರೆಗದ್ದೆಯ ದರ್ಶನ ಮಂಜುನಾಥ ನಾಯ್ಕ ಹಾಗೂ ಶಿರಾಲಿಯ ನಾರಾಯಣ ನಾಗಪ್ಪ ಗುಡಿಹತ್ಲ ಅವರ ಮೇಲೆ ಅನುಮಾನವ್ಯಕ್ತಪಡಿಸಿದರು. ಗ್ರಾಮೀಣ ಠಾಣೆಯ ಪಿಐ ಮಂಜುನಾಥ ಲಿಂಗಾರೆಡ್ಡಿ, ಪಿಎಸ್ಐ ರನ್ನಗೌಡ ಅವರಿಬ್ಬರನ್ನು ವಿಚಾರಣೆಗೆ ಒಳಪಡಿಸಿದರು.
ಆಗ ಅವರಿಬ್ಬರು ಸೇರಿ ದೇವಾಲಯದಲ್ಲಿ ಕಳ್ಳತನ ಮಾಡಿರುವುದು ಖಚಿತವಾಯಿತು. ಕಳ್ಳತನಕ್ಕೆ ಬಳಸಿದ್ದ ಬೈಕು ಸೇರಿ 1.20 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆಪಡೆದರು. ಆ ಕಳ್ಳರಿಬ್ಬರನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯ ಅವರನ್ನು ಜೈಲಿಗೆ ಕಳುಹಿಸಿದೆ.
