ಯಲ್ಲಾಪುರದ ಬಿಳಕಿ ಬಳಿಯ ಅರಣ್ಯ ಪ್ರದೇಶದಲ್ಲಿ ರುಂಡ ಕಡಿದ ಹೋರಿಯ ಕಳೆಬರಹ ಪತ್ತೆಯಾಗಿದೆ. ದುಷ್ಟರು ಹೋರಿಯನ್ನು ಕೊಂದಿರುವ ಅನುಮಾನವ್ಯಕ್ತವಾಗಿದೆ.
ಬಿಳಕಿ ಚಂದ್ರಿಕಾ ನಾಯ್ಕ ಅವರು ಕೃಷಿ, ಕೂಲಿ ಕೆಲಸದ ಜೊತೆ ಹೈನುಗಾರಿಕೆ ಮಾಡಿಕೊಂಡಿದ್ದರು. ತಮ್ಮ ಜಾನುವಾರುಗಳನ್ನು ಅವರು ಮೇವಿಗಾಗಿ ಕಾಡಿಗೆ ಬಿಡುತ್ತಿದ್ದರು. ಅದರ ಪ್ರಕಾರ ಅಗಸ್ಟ 28ರಂದು ಎರಡು ಹಸು ಹಾಗೂ ಒಂದು ಹೋರಿಯನ್ನು ಮೇವಿಗಾಗಿ ಕಾಡಿಗೆ ಬಿಟ್ಟು ಬಂದಿದ್ದರು.
ಆ ದಿನ ರಾತ್ರಿ ಎರಡು ಹಸು ಮಾತ್ರ ಕೊಟ್ಟಿಗೆ ಪ್ರವೇಶಿಸಿದ್ದು, 3 ವರ್ಷದ ಹೋರಿ ಬರಲಿಲ್ಲ. ಬೆಳಗ್ಗೆ ಬೇಗ ಎದ್ದು ಅವರು ಹೋರಿಯನ್ನು ಹುಡುಕುತ್ತ ಕಾಡಿಗೆ ಹೋದರು. ಸಾಕಷ್ಟು ಅಲೆದಾಟದ ನಂತರ ಆ ಅರಣ್ಯ ಪ್ರದೇಶದಲ್ಲಿ ಕಪ್ಪು ಹೋರಿಯ ರುಂಡ ಕಾಣಿಸಿತು. ಜೊತೆಗೆ ಚರ್ಮವೂ ಅಲ್ಲಿಯೇ ಬಿದ್ದಿತ್ತು.
ಮೊದಲು ಹೋರಿಯನ್ನು ಯಾವುದೋ ಪ್ರಾಣಿ ತಿಂದಿರಬಹುದು ಎಂದು ಚಂದ್ರಿಕಾ ನಾಯ್ಕ ಅವರು ಅನುಮಾನಿಸಿದರು. ಆದರೆ, ಪ್ರಾಣಿ ತಿಂದಾಗ ಬಿದ್ದಿರಬೇಕಾದ ಅರೆಬರೆ ಮಾಂಸ ಅಲ್ಲಿ ಕಾಣಲಿಲ್ಲ. ಹೀಗಾಗಿ ದುಷ್ಟರು ಹೋರಿಯನ್ನು ಹಿಂಸಿಸಿ ಕೊಂದಿರುವ ಬಗ್ಗೆ ಅನುಮಾನ ಮೂಡಿತು.
ಈ ಬಗ್ಗೆ ಚಂದ್ರಿಕಾ ನಾಯ್ಕ ಅವರು ಅದೇ ಊರಿನ ಈಶ್ವರ ನಾಯ್ಕ ಅವರ ಬಳಿ ಹೇಳಿಕೊಂಡರು. ಈಶ್ವರ ನಾಯ್ಕ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪ್ರಕರಣ ದಾಖಲಿಸಿಕೊಂಡ ಯಲ್ಲಾಪುರ ಪಿಎಸ್ಐ ಮಹಾವೀರ ಕಾಂಬಳೆ ಅವರು ಈ ಬಗ್ಗೆ ತನಿಖೆ ಶುರು ಮಾಡಿದರು.
