ಊಟ ಹಾಗೂ ಸರಾಯಿ ವಿಷಯವಾಗಿ ಮದ್ಯರಾತ್ರಿ 1 ಗಂಟೆಗೆ ಅಂಕೋಲಾದ ಬಾರ್ & ರೆಸ್ಟೋರೆಂಟಿನಲ್ಲಿ ಹೊಡೆದಾಟ ನಡೆದಿದೆ. ಎರಡು ಗುಂಪಿನ ನಡುವೆ ನಡೆದ ಹೊಡೆದಾಟದಲ್ಲಿ ನಾಲ್ವರು ಪೆಟ್ಟು ಮಾಡಿಕೊಂಡಿದ್ದಾರೆ.
ಅoಕೋಲಾದ ಬಾಳೆಗುಳಿಯಲ್ಲಿರುವ ಮಧುವನ ಬಾರ್ & ರೆಸ್ಟೋರೆಂಟಿನಲ್ಲಿ ಅಗಸ್ಟ 30ರ ರಾತ್ರಿ ಗಲಾಟೆ ನಡೆದಿದೆ. ಬಾರಿನ ಸಿಬ್ಬಂದಿ ಮನೋಜ ಶೆಟ್ಟಿ, ಅವರ ಸ್ನೇಹಿತ ಪ್ರಶಾಂತ ಹಾಗೂ ನಡು ರಾತ್ರಿ ವ್ಯವಹಾರಕ್ಕೆ ಹೋಗಿದ್ದ ಸುಜನ ನಾಯಕ ಹಾಗೂ ಅವರ ತಮ್ಮ ದರ್ಶನ ಅವರಿಗೆ ಗಲಾಟೆಯಲ್ಲಿ ಪೆಟ್ಟಾಗಿದೆ. ಈ ಹೊಡೆದಾಟದಲ್ಲಿ ಎರಡು ಗುಂಪಿನವರಿಗೂ ಕಾರಿನಲ್ಲಿ ಬಂದ ಒಬ್ಬ ಪುರುಷ ಹಾಗೂ ಮಹಿಳೆ ಥಳಿಸಿದ್ದು, ಅವರು ಯಾರು ಎಂದು ಯಾರಿಗೂ ಗೊತ್ತಾಗಿಲ್ಲ!
ದಕ್ಷಿಣ ಕನ್ನಡ ಮೂಲದ ಮನೋಜ ಶೆಟ್ಟಿ ಅವರು ಬಾಳೆಗುಳಿಯಲ್ಲಿ ವಾಸವಾಗಿದ್ದು, ಅವರು ಅಲ್ಲಿನ ಮಧುವನ ಬಾರ್ & ರೆಸ್ಟೋರೆಂಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ದೂರಿದ ಪ್ರಕಾರ ಅಗಸ್ಟ 30ರ ರಾತ್ರಿ 1 ಗಂಟೆಗೆ ಆರು ಜನ ಆಗಮಿಸಿ ಬಾರಿನ ಬಾಗಿಲು ಬಡೆದಿದ್ದು, ಸರಾಯಿ ಕೊಡುವಂತೆ ಕೇಳಿದ್ದಾರೆ. ಬಾರ್ ಬಂದ್ ಆದ ಬಗ್ಗೆ ತಿಳಿಸಿದಾಗ ಅವರೆಲ್ಲರೂ ಸೇರಿ ಮನೋಜ ಶೆಟ್ಟಿ ಹಾಗೂ ಪ್ರಶಾಂತ ಅವರಿಗೆ ಥಳಿಸಿದ್ದಾರೆ. `ಬಾರಿನ ಚಾವಿಯನ್ನು ಮಾಲಕರು ತೆಗೆದುಕೊಂಡು ಹೋಗಿದ್ದಾರೆ’ ಎಂದು ತಿಳಿಸಿದರೂ ಬಿಡದೇ ಹೊಡೆದ ಬಗ್ಗೆ ಮನೋಜ ಶೆಟ್ಟಿ ಅಳಲು ತೋಡಿಕೊಂಡಿದ್ದಾರೆ. `ನೀವು ಮಂಗಳೂರಿನಿAದ ಬಂದವರು. ನಾವು ಇಲ್ಲಿಯವರಾಗಿದ್ದು, ನಮ್ಮ ಮಾತೇ ಇಲ್ಲಿ ನಡೆಯಬೇಕು’ ಎಂದು ಹೊಡೆದವರು ತಾಕೀತು ಮಾಡಿದ ಬಗ್ಗೆಯೂ ದೂರಿದ್ದಾರೆ.
ಇದೇ ಪ್ರಕರಣಕ್ಕೆ ಸಂಬAಧಿಸಿ ಬಾಳೆಗುಳಿಯ ಸುಜನ್ ನಾಯಕ ಅವರು ಪೊಲೀಸರ ಬಳಿ ಮತ್ತೊಂದು ಕತೆ ಹೇಳಿದ್ದಾರೆ. `ಗಣಪತಿ ನೋಡಲು ಹೋಗಿದ್ದ ನಾವು ಎಲ್ಲಾ ಕಡೆ ಸುತ್ತಾಡಿ ಮರಳಿದಾಗ ರಾತ್ರಿ ಆಗಿತ್ತು. ಹಸಿವಾದ ಕಾರಣ ಮಧುವನ ಬಾರ್ & ರೆಸ್ಟೋರೆಂಟಿಗೆ ಹೋಗಿ ಊಟ ಕೇಳಿದ್ದು, ರಾತ್ರಿ 1ಗಂಟೆಗೆ ಬಂದರೆ ಹೇಗೆ ಊಟ ಕೊಡಲಿ? ಎಂದು ಪ್ರಶ್ನಿಸಿದರು. ಜೊತೆಗೆ ನಮಗೆ ಬಯ್ಯಲು ಶುರು ಮಾಡಿದ್ದು, ಯಾಕೆ ಬೈಯ್ಯುತ್ತೀರಿ? ಎಂದು ಕೇಳಿದ ಕಾರಣ ನನಗೆ ಹಾಗೂ ದರ್ಶನ ಅವರಿಗೆ ಹೊಡೆದರು’ ಎಂದವರು ಹೇಳಿದ್ದಾರೆ. `ಈ ವೇಳೆ ಕಾರಿನಲ್ಲಿ ಬಂದ ಒಬ್ಬ ಪುರುಷ ಹಾಗೂ ಮತ್ತೊಬ್ಬ ಮಹಿಳೆ ಸಹ ನಮ್ಮ ಮೇಲೆ ದಾಳಿ ನಡೆಸಿದ್ದಾರೆ. ನನ್ನ ಮೊಬೈಲನ್ನು ಕಸಿದು ನೆಲಕ್ಕೆ ಅಪ್ಪಳಿಸಿದ್ದಾರೆ’ ಎಂದು ಸುಜನ್ ನಾಯಕ ದೂರಿದ್ದಾರೆ.
ಅಂಕೋಲಾ ಪೊಲೀಸರು ಎರಡು ಕಡೆಯವರ ಅಳಲು ಆಲಿಸಿ, ಪ್ರಕರಣ ದಾಖಲಿಸಿದ್ದಾರೆ. ಎರಡು ಕಡೆಯವರ ವಿಚಾರಣೆ ಮುಂದುವರೆದಿದೆ.
